6 ವರ್ಷಗಳ ಹಿಂದಿನ ಕಕ್ಕೂರಿನ ನಾಲ್ವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು
ಮಂಗಳೂರು, ಫೆಬ್ರವರಿ 13: ಭಾರೀ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಕ್ಕೂರಿನ ನಾಲ್ವರ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದೆ. 2012ರ ಜೂನ್ 12 ರಂದು ರೆಂಜ ಸಮೀಪದ ಕಕ್ಕೂರಿನ ಮನೆಯಲ್ಲಿ ತಾಯಿ ಹಾಗೂ 3 ಮಕ್ಕಳ ಕೊಲೆ ನಡೆದಿತ್ತು.
ಕೊಲೆ ನಡೆದು 3 ದಿನಗಳ ಬಳಿಕ, ವಿದ್ಯುತ್ ಇಲಾಖೆಯ ಸಿಬ್ಬಂದಿ ವಿದ್ಯುತ್ ಬಿಲ್ ನೀಡಲು ಮನೆಗೆ ಭೀಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿತ್ತು. ತನ್ನ ಪತ್ನಿ ಹಾಗೂ ಮಕ್ಕಳನ್ನು ನಾಟಿ ವೈದ್ಯ , ಜ್ಯೋತಿಷಿ ವೆಂಕಟರಮಣ ಭಟ್ ಅವರೇ ಈ ಹತ್ಯೆ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿತ್ತು.
ಕೊಲೆ ಪ್ರಕರಣ ಬೆಳಕಿಗೆ ಬಂದ 3 ದಿನಗಳ ಬಳಿಕ ಕಕ್ಕೂರು ಕಾಡಿನಲ್ಲಿ ಗಂಡಸಿನ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಇದು ವೆಂಕಟರಮಣ ಭಟ್ ರದ್ದೇ ಎಂದು ತೀರ್ಮಾನಿಸಿ ಪ್ರಕರಣವನ್ನು ಮುಚ್ಚುವ ತೀರ್ಮಾನಕ್ಕೂ ಬರಲಾಗಿತ್ತು. ವೆಂಕಟರಮಣ ಭಟ್ ತನ್ನ ಪತ್ನಿ ಸಂಧ್ಯಾ, ಮಕ್ಕಳಾದ ಹರಿ ಗೋವಿಂದ, ವೇದ್ಯಾ ಮತ್ತು ವಿನುತಾ ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ತಿಳಿಯಲಾಗಿತ್ತು.

ಕಾಡಿನಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರದ ಮಾದರಿಯನ್ನು ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 6 ವರ್ಷಗಳ ಹಿಂದೆ ನಡೆದ ಪ್ರಕರಣದ ಕುರಿತು ಈಗ ಪುಣೆಯ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿದ ವರದಿಯಲ್ಲಿ ಅಸ್ಥಿಪಂಜರಕ್ಕೂ, ಕಕ್ಕೂರು ವೆಂಕಟರಮಣ ಭಟ್ ರ ಸೋದರನ ರಕ್ತದ ಮಾದರಿಗೂ ಸರಿ ಹೊಂದುವುದಿಲ್ಲ ಎಂದು ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ದೊರೆತ ಅಸ್ಥಿಪಂಜರ ಯಾರದ್ದು ಎಂಬ ಪ್ರಶ್ನೆ ಉದ್ಬವಿಸಿದೆ.
ಮನೆ ಮಂದಿಯ ಕೊಲೆ ಪ್ರಕರಣ ಬೆಳಕಿಗೆ ಬರುವ ಮೊದಲು ಈ ಮನೆಯಲ್ಲಿ ದರೋಡೆ ಕೂಡ ನಡೆದಿತ್ತು. ಕಾಡಿನ ಮಧ್ಯೆ ಇರುವ ಈ ಮನೆಯ ಪರಿಸರದಲ್ಲಿ ನಾಗಮಣಿ ಶೋಧದ ಯತ್ನವೂ ನಡೆಯುತ್ತಿದ್ದವು ಎಂದು ಹೇಳಲಾಗಿತ್ತು. ವೆಂಕಟರಮಣ ಭಟ್ ನಾಗಮಣಿ ಶೋಧ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ನಾಗಮಣಿ ಶೋಧಕ್ಕೂ ಹಾಗೂ ಈ ಕೊಲೆಗಳಿಗೆ ಸಂಬಂಧವಿದೆಯೇ? ಎಂಬ ಸಂಶಯ ಮೂಡಲಾರಂಭಿಸಿದೆ. ಈ ಹತ್ಯೆಗಳ ಹಿಂದಿನ ಕೈವಾಡ ಯಾರದು? ಎನ್ನುವ ಪತ್ತೆ ಕಾರ್ಯ ಇನ್ನು ನಡೆಯಬೇಕಿದೆ. ಈ ನಡುವೆ ವೆಂಕಟರಮಣ ಭಟ್ ಎಲ್ಲಿ ಹೋದರು? ಏನಾದರೂ ಎಂಬುದೇ ನಿಗೂಢವಾಗಿದೆ.












Click it and Unblock the Notifications