ಪಿಲಿಕುಳ ಉದ್ಯಾನವನದಲ್ಲಿ ಹುಲಿ ದಿಢೀರ್ ಸಾವು; ಇತರ ಪ್ರಾಣಿಗಳ ಬಗ್ಗೆ ಆತಂಕ
ಮಂಗಳೂರು, ಜನವರಿ 4: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಆರೋಗ್ಯವಾಗಿದ್ದ ಹುಲಿ ದಿಢೀರ್ ಆಗಿ ಸಾವನ್ನಪ್ಪಿದೆ. ಇದ್ದಕ್ಕಿದ್ದಂತೆ ಹುಲಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಉದ್ಯಾನವನದಲ್ಲಿ ಆತಂಕ ಮೂಡಿಸಿದೆ. ಹುಲಿ ಸಾವಿನ ಹಿನ್ನಲೆಯಲ್ಲಿ ಇತರ ಪ್ರಾಣಿಗಳ ಆರೋಗ್ಯದ ಮೇಲೂ ವಿಶೇಷ ನಿಗಾ ಇರಿಸಲಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದ ಒಂಭತ್ತು ವರ್ಷ ಪ್ರಾಯದ ಒಲಿವರ್ ಹುಲಿ ದಿಢೀರ್ ಸಾವನ್ನಪ್ಪಿದೆ. ಮಂಗಳವಾರ ಮುಂಜಾನೆ ವೇಳೆಗೆ ಘಟನೆ ನಡೆದಿದ್ದು, ಆರೋಗ್ಯವಾಗಿಯೂ, ಸದೃಢವಾಗಿದ್ದ ಹುಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದೆ. ಕುಸಿದು ಬಿದ್ದ ಸಂದರ್ಭದಲ್ಲಿ ತಕ್ಷಣ ಉದ್ಯಾನವನದ ವೈದ್ಯರು ಹುಲಿಗೆ ಚಿಕಿತ್ಸೆ ನೀಡಿದರೂ ಅಷ್ಟಾರಲ್ಲಾಗಲೇ ಹುಲಿಯು ಮೃತಪಟ್ಟಿತ್ತು.
ಈ ಒಲಿವರ್ ಹುಲಿಯ ಜನನ ಪಿಲಿಕುಳದಲ್ಲೇ ಆಗಿದ್ದು, ಪಿಲಿಕುಳದ ವಿಕ್ರಮ ಮತ್ತು ಶಾಂಭವಿ ಎಂಬ ಹುಲಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ಇತರ ಹುಲಿಗಳೊಡೆನೆ ಈ ಒಲಿವರ್ ಎಂಬ ಹುಲಿಯೂ ಬೆರೆತಿತ್ತು.

ಸದ್ಯ ಪಿಲಿಕುಳದಲ್ಲಿ 12 ಹುಲಿಗಳಿದ್ದು, ಒಲಿವರ್ ಹುಲಿಯ ಸಾವು ಉದ್ಯಾನವನ ಸಿಬ್ಬಂದಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ. ಹೀಗಾಗಿ ಹುಲಿಯ ಧಿಡೀರ್ ಸಾವಿಗೆ ಕಾರಣವೇನು ಎಂಬುದರ ಪತ್ತೆಗೆ ಈಗ ಉದ್ಯಾನವನದ ಆಡಳಿತ ಮಂಡಳಿ ಮುಂದಾಗಿದೆ.
ಮೃತ ಒಲಿವರ್ ಹುಲಿಯ ಅಂಗಾಂಗ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿನ IAH&VB ಕೇಂದ್ರಕ್ಕೆ ಮತ್ತು ಉತ್ತರಪ್ರದೇಶದ IVRI ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹುಲಿಯ ಕೋವಿಡ್ ಪರೀಕ್ಷೆಗಾಗಿ ಭೋಪಾಲದ NHSAD ಪ್ರಯೋಗಾಲಕ್ಕೆ ಕಳುಹಿಸಲಾಗಿದೆ.
ಒಲಿವರ್ ಹುಲಿಯ ದಿಢೀರ್ ಸಾವು ಹಿನ್ನಲೆಯಲ್ಲಿ ಅನುಮಾನಸ್ಪದ ರೋಗ ಹರಡದಂತೆ ಪಿಲಿಕುಳ ಜೈವಿಕ ಉದ್ಯಾನವನದ ಪ್ರತೀ ಪ್ರಾಣಿಗಳ ಬೆರೆಕ್‌ಗಳಿಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗಿದೆ.
ಒಲಿವರ್ ಜೊತೆಗಿದ್ದ ಹುಲಿಗಳ ಆರೋಗ್ಯದ ಬಗ್ಗೆಯೂ ವಿಶೇಷ ನಿಗಾ ವಹಿಸಲಾಗಿದೆ. ಆರೋಗ್ಯವಾಗಿದ್ದ ಹುಲಿಯ ದಿಢೀರ್ ಸಾವಿನ ಬಗ್ಗೆ ಅನುಮಾನಗಳೂ ಕೇಳಿಬಂದಿದೆ. ಉದ್ಯಾನವನವನ್ನು ನೋಡಿಕೊಳ್ಳುವವರಿಂದ ಪ್ರಾಣಿಗಳ ಸರಿಯಾದ ಲಾಲನೆ ಪಾಲನೆ ಆಗುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿದೆ.
ಈ ಹಿಂದೆಯೂ ಹುಲಿಯೊಂದು ಮೃತಪಟ್ಟ ಸಂದರ್ಭದಲ್ಲಿ ಹುಲಿಗೆ ನೀಡಿದ ಆಹಾರದಲ್ಲಿ ವ್ಯತ್ಯಾಸವಾಗಿತ್ತು. ಕೊಳೆತ ಆಹಾರವನ್ನು ನೀಡಲಾಗುತ್ತಿದೆ, ಪ್ರಾಣಿಗಳ ಆಹಾರದಲ್ಲೂ ಅಕ್ರಮ ಎಸಗಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿತ್ತು. ಅಲ್ಲದೇ ಪ್ರಾಣಿಗಳಿಗೆ ಆಹಾರ ಒದಗಿಸುವ ವ್ಯಕ್ತಿಯ ಮೇಲೆ ಕಳಪೆ ಮಾಂಸ ನೀಡುತ್ತಿರುವ ದೂರುಗಳಿದ್ದರೂ, ಪ್ರಭಾವ ಬಳಸಿ ಆತನಿಂದಲೇ ಆಹಾರ ಖರೀದಿಸಲಾಗುತ್ತಿದೆ ಎಂಬ ಆರೋಪ ಕೂಡಾ ವ್ಯಕ್ತವಾಗಿತ್ತು.
ಇನ್ನು ಒಲಿವರ್ ಹುಲಿ ಸಾವಿನ ಕುರಿತು ಪ್ರತಿಕ್ರಿಯೆ ನೀಡಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ, "ಮುಂಜಾನೆ ವೇಳೆಗೆ ಒಲಿವರ್ ಹುಲಿ ದಿಢೀರ್ ಸಾವು ಕಂಡಿದೆ. ತಕ್ಷಣ ಹುಲಿಯ ಸಾವಿನ ಬಗ್ಗೆ ತನಿಖೆ ಮಾಡಲಿದ್ದೇವೆ. ಈಗಾಗಲೇ ಹುಲಿಯ ಅಂಗಾಂಗ ಮಾದರಿಯನ್ನು ಪರೀಕ್ಷೆಗೆ ಉನ್ನತ ಲ್ಯಾಬ್‌ಗಳಿಗೆ ಕಳುಹಿಸಲಾಗಿದೆ. ಎರಡು ದಿನಗಳಲ್ಲಿ ಹುಲಿ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಈ ಹಿಂದೆಯೂ ಪ್ರಾಣಿಗಳ ಅಸಹಜ ಸಾವು ಕಂಡುಬಂದಿತ್ತು. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಲಾಗಿದೆ.












Click it and Unblock the Notifications