ಬ್ಯಾಂಕ್ ದರೋಡೆ ಮಾಡಿದ್ದ ಮೂವರು ಅರೆಸ್ಟ್, ಅಸಲಿಗೆ ಯಾರಿವರು?
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಮಂಗಳೂರಿನ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳು ಕೊನೆಗೂ ಅರೆಸ್ಟ್ ಆಗಿದ್ದಾರೆ. ಆರೋಪಿಗಳ ಬೆನ್ನುಹತ್ತಿರುವ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದರೋಡೆ ನಡೆದ ನಂತರ ಅವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಎಸ್ಕೇಪ್ ಆಗಿದ್ದರು.
ಆದರೆ, ಆರೋಪಿಗಳ ಜಾಡು ಹಿಡಿದು ಹೋಗಿದ್ದ ಪೊಲೀಸರಿಗೆ ಕೊನೆಗೂ ತಮಿಳುನಾಡಿನಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮಧುರೈ ಬಳಿ ಆರೋಪಿಗಳನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಬ್ಯಾಂಕ್ ದರೋಡೆ ಬಳಿಕ ಅವರು ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಬಳಿ 2 ಗೋಣಿಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಪತ್ತೆಯಾಗಿದ್ದು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಬ್ಯಾಂಕ್‌ನ ದರೋಡೆಯ ಹಿಂದೆ ಮುಂಬೈ ಮೂಲದ ಗ್ಯಾಂಗ್‌ನ ಕೈವಾಡವಿದ್ದು, ತಮಿಳುನಾಡು ಮೂಲದ ಮುರುಗನ್, ಪ್ರಕಾಶ್ , ಮಣಿವಣ್ಣನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಫಿಯೆಟ್ ಕಾರು, ಹಣ, ಚಿನ್ನ ತುಂಬಿಕೊಂಡು ಹೋಗಿದ್ದ ಎರಡು ಗೋಣಿ ಚೀಲಗ ಕೂಡ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?: ಮಂಗಳೂರಿನ ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕಿಗೆ ನುಗ್ಗಿದ್ದ ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಅಲ್ಲಿಂದ ಕೋಟಿಗಟ್ಟಲೆ ಹಣ ದರೋಡೆ ಮಾಡಿ ಪರಾರಿಯಾಗಿದ್ದರು. ಇದು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕಾರಿನಲ್ಲಿ ಬಂದಿದ್ದ ಆರೋಪಿಗಳು ದಿಢೀರನೆ ಬ್ಯಾಂಕ್ ಒಳಗೆ ನುಗ್ಗಿ ದರೋಡೆ ಮಾಡಿ ರಾಜಾರೋಷವಾಗಿ ಎಸ್ಕೇಪ್ ಆಗಿದ್ದರು.
ಕೋಟೆಕರ್ ಉಲ್ಲಾಳದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ ಶೀಘ್ರ ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎಷ್ಟೆಲ್ಲಾ ಟೋಲ್‌ಗಳನ್ನ ದಾಟಿ ಹೋಗಿದ್ದಾರೆ. ತಕ್ಷಣ ಟೋಲ್‌ಗಳನ್ನ ಏಕೆ ಬಿಗಿ ಮಾಡಲಿಲ್ಲ? ಎಲ್ಲ ಟೋಲ್‌ಗಳಲ್ಲೂ ಬಿಗಿ ತಪಾಸಣೆ ನಡೆಸಬೇಕು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಪ್ಪಿಸಬೇಕು ಎಂದು ಖಡಕ್ ಆಗಿ ಸೂಚಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಬಳಿಯ ಕೆ.ಸಿ.ರೋಡ್‌ನ ಸಹಕಾರಿ ಬ್ಯಾಂಕ್‌ನಲ್ಲಿ ಜನವರಿ 17ರಂದು ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು. ಆರೋಪಿಗಳು ಮಹಾರಾಷ್ಟ್ರದ ಕಾರು ಬಳಸಿ ದರೋಡೆ ಮಾಡಿದ್ದು, ಹಣ ದೋಚಿಕೊಂಡು ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿಯಾಗಿದ್ದರು. ಸದ್ಯದ ಮಾಹಿತಿ ಪ್ರಕಾರ ಬಂಧಿತರೆಲ್ಲರೂ ತಮಿಳುನಾಡಿನ ಮೂಲದವರು ಎಂದೂ ತಿಳಿಸಿದ್ದಾರೆ.











Click it and Unblock the Notifications