ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೀಗ ಜನವೋ ಜನ
ಮಂಗಳೂರು : ರಾಜ್ಯದ ಅತ್ಯಂತ ಶ್ರೀಮಂತ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲೀಗ ಎಲ್ಲೆಲ್ಲೂ ಜನಸಾಗರ. ಬೇಸಿಗೆ ರಜಾಕಾಲವಾದುದರಿಂದ ರಾಜ್ಯದ ಹಾಗೂ ದೇಶದ ವಿವಿಧೆಡೆಗಳಿಂದ ಭಕ್ತರು ಈ ಪ್ರಸಿದ್ಧ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಕಳೆದ ವಾರಾಂತ್ಯದಿಂದ ಮಂಗಳವಾರದವರೆಗೆ ಕ್ಷೇತ್ರಕ್ಕೆ ದಾಖಲೆ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆಂದೇ ಹೇಳಬಹುದು.
ಶನಿವಾರ ರಾಷ್ಟ್ರೀಕೃತ ಬ್ಯಾಂಕುಗಳಿಗೆ ರಜೆಯಾಗಿದ್ದರಿಂದ ಹಾಗೂ ಸೋಮವಾರ ಕೂಡ ಮೇ ದಿನ ಪ್ರಯುಕ್ತ ರಜೆಯಿದ್ದುದರಿಂದ ಮೂರು ದಿನಗಳ ರಜೆಯ ಸದುಪಯೋಗ ಪಡಿಸಿಕೊಂಡು ಅಸಂಖ್ಯಾತ ಭಕ್ತಾದಿಗಳು ಕ್ಷೇತ್ರಕ್ಕೆ ಚಿತ್ತೈಸಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.

ಕ್ಷೇತ್ರದಲ್ಲಿ ರವಿವಾರದಂದು ಒಟ್ಟು 1084 ಆಶ್ಲೇಷ ಬಲಿ ಪೂಜೆ ನಡೆದರೆ, 101 ತುಲಾಭಾರ ಸೇವೆ ಹಾಗೂ 362 ನಾಗ ಪ್ರತಿಷ್ಠೆ ಸೇವೆಗಳು ಜರುಗಿವೆ. ವಾಹನಗಳ ಉದ್ದ ಸರತಿ ಸಾಲು ಎಲ್ಲೆಂದರಲ್ಲಿತ್ತಲ್ಲದೆ ದೇವಳ ಪ್ರವೇಶಿಸಲೂ ಭಕ್ತಾದಿಗಳು ಗಂಟೆಗಳ ಕಾಲ ಸರತಿ ನಿಲ್ಲಬೇಕಾಗಿ ಬಂದಿತ್ತು.
ದೇವಳದ ಆಡಳಿತದಲ್ಲಿರುವ ಹಾಗೂ ಖಾಸಗಿ ಲಾಡ್ಜುಗಳೆಲ್ಲವೂ ಭರ್ತಿಯಾಗಿದ್ದವು ಹಾಗೂ ಹಲವಾರು ಭಕ್ತರು ವಸತಿ ವ್ಯವಸ್ಥೆಗಾಗಿ ಹರಸಾಹಸಪಟ್ಟರು.
ಅಪಾರ ಸಂಖ್ಯೆಯ ಭಕ್ತರ ಆಗಮನದಿಂದ ಉಂಟಾದ ವಾಹನ ದಟ್ಟಣೆ ಹಾಗೂ ಮೂಲಸೌಕರ್ಯಗಳ ಕೊರತೆಯೂ ಹಲವೆಡೆ ಅನಾನುಕೂಲತೆ ಸೃಷ್ಟಿಸಿತು.











Click it and Unblock the Notifications