'ದ.ಕ. ಜಿಲ್ಲೆಯಲ್ಲಿ ಯಾವುದೇ ಪಿಯುಸಿಎಲ್ ಘಟಕವಿಲ್ಲ': ರಾಷ್ಟ್ರೀಯ ಸಮಿತಿ ಸ್ಪಷ್ಟನೆ
ಮಂಗಳೂರು, ಆಗಸ್ಟ್ 21: ''ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪಿಯುಸಿಎಲ್ ಅಧಿಕೃತ ಘಟಕ ಇಲ್ಲ. ಪಿಯುಸಿಎಲ್ ಹೆಸರಿನಲ್ಲೇ ಯಾವುದೇ ಚಟುವಟಿಕೆ ನಡೆದರೆ ಅದು ವಂಚನೆಯೇ ಹೊರತು ಪಿಯುಸಿಎಲ್‌ಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ,'' ಎಂದು ಪಿಯುಸಿಎಲ್‌ನ ರಾಷ್ಟ್ರೀಯ ಘಟಕವು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪಿಯುಸಿಎಲ್‌ನ ರಾಷ್ಟ್ರೀಯ ಅಧ್ಯಕ್ಷ ರವಿ ಕಿರಣ್ ಜೈನ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ ಸುರೇಶ್, ''ಆರ್ ಈಶ್ವರ್ ರಾಜ್, ಹನೀಫ್ ಸಾಹೇಬ್ ಪಜ್ಜಪಲ್ಲ ಹಾಗೂ ಅಜಯ್ ಡಿ'ಸಿಲ್ವಾ ತಾವು ಪಿಯುಸಿಎಲ್‌ನ ದ.ಕ. ಜಿಲ್ಲೆ ಘಟಕದ ಕ್ರಮವಾಗಿ ಅಧ್ಯಕ್ಷರು, ಖಜಾಂಚಿ ಹಾಗೂ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಇವರನ್ನು ಡಿಸೆಂಬರ್ 2018 ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಈ ಮೂವರು ಹೇಳಿಕೊಂಡಿದ್ದಾರೆ. ಆದರೆ ಈ ಎಲ್ಲಾ ಹೇಳಿಕೆಗಳು ಸುಳ್ಳು. ಈ ಮೂವರೂ ಕೂಡಾ ಪಿಯುಸಿಎಲ್‌ಗೆ ಸಂಬಂಧ ಹೊಂದಿರುವವರು ಅಲ್ಲ,'' ಎಂದು ಹೇಳಿದ್ದಾರೆ.
''2019 ರ ಜನವರಿ 6 ರಂದು ಪಿಯುಸಿಎಲ್‌ನ ಕರ್ನಾಟಕ ರಾಜ್ಯ ಘಟಕದ ಸಭೆಯನ್ನು ಮೈಸೂರಿನಲ್ಲಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ 2018 ರಲ್ಲಿ ರಚಿಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿಎಲ್ ಘಟಕವನ್ನು ಪಿಯುಸಿಎಲ್ ಸಂವಿಧಾನಕ್ಕೆ ವಿರುದ್ದವಾಗಿ ನಡೆದು ಕೊಂಡಿದ್ದಾರೆ ಎಂಬುವುದು ತಿಳಿದು ಬಂದಿದೆ. ಈ ಹಿನ್ನೆಲೆ ಕರ್ನಾಟಕ ಸ್ಟೇಟ್ ಕೌನ್ಸಿಲ್ ಕರ್ನಾಟಕ ಪಿಯುಸಿಎಲ್ ಉಪಾಧ್ಯಕ್ಷ ಡಾ. ಲಕ್ಷೀ ನಾರಾಯಣರನ್ನು ಆಡ್ ಹೆಚ್‌ಒಸಿ ಕಮಿಟಿ ಆಯ್ಕೆಗಾಗಿ ನಿಯೋಜಿಸಲಾಯಿತು ಹಾಗೂ ಪಿಯುಸಿಎಲ್‌ನ ದಕ್ಷಿಣ ಕನ್ನಡ ಘಟಕವು ರಾಷ್ಟ್ರೀಯ ಘಟಕದ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿತ್ತು,'' ಎಂದು ರಾಷ್ಟ್ರೀಯ ಘಟಕ ತಿಳಿಸಿದೆ.

'ಆದರೆ ದಕ್ಷಿಣ ಕನ್ನಡ ಪಿಯುಸಿಎಲ್ ಘಟಕದ ಒಳಗೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ಹಾಗೂ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದ ಹಿನ್ನೆಲೆ 2020 ರ ಮಾರ್ಚ್ 8 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿಎಲ್ ಘಟಕವನ್ನು ಬರ್ಕಾಸು ಮಾಡಿ ಹಾಗೂ ಪಿಯುಸಿಎಲ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯ ಹೊರತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯುಸಿಎಲ್ ಹೆಸರಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಪಿಯುಸಿಎಲ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವಿ ಸುರೇಶ್ ಘೋಷಿಸಿದ್ದಾರೆ. ಈ ನಿರ್ಧಾರವು 2020 ರ ಫೆಬ್ರವರಿ 21-22 ರಣದಯ ಅಲಹಬಾದ್‌ನಲ್ಲಿ ನಡೆದ ಪಿಯುಸಿಎಲ್ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಧಾರ ಭಾಗವಾಗಿ ಈ ಘೋಷನೆ ಮಾಡಲಾಗಿದೆ. ಹಾಗಾಗಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಯುಸಿಎಲ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂವರನ್ನು ಒಳಗೊಂಡ ಗುಂಪು ಪಿಯುಸಿಎಲ್‌ಗೆ ಸಂಬಂಧಿಸಿದಲ್ಲ,'' ಎಂದು ರಾಷ್ಟ್ರೀಯ ಘಟಕ ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿದೆ.
''ಈ ಎಲ್ಲಾ ಬೆಳವಣಿಗೆಯ ಹೊರತಾಗಿಯೂ ಆರ್ ಈಶ್ವರ್ ರಾಜ್, ಹನೀಫ್ ಸಾಹೇಬ್ ಪಜ್ಜಪಲ್ಲ ಹಾಗೂ ಅಜಯ್ ಡಿ'ಸಿಲ್ವಾ 2020 ರ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಪಿಯುಸಿಎಲ್ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ ಹಾಗೂ ಜನರಿಗೆ ದಿನಸಿ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಘಟಕದ ಗಮನಕ್ಕೆ ಬಂದಿದೆ. ಈಗಾಗಲೇ ಜಿಲ್ಲೆಯ ಪಿಯುಸಿಎಲ್ ಘಟಕವನ್ನು ಬರ್ಕಾಸು ಮಾಡಿರುವ ಕಾರಣ ಈ ಹಣ ಸಂಗ್ರಹ ಸಂಪೂರ್ಣವಾಗಿ ಅನಧಿಕೃತ ಹಾಗೂ ಅಕ್ರಮ ಎಂಬ ಹಿನ್ನೆಲೆ 2020 ರ ಮೇ 2 ರಂದು ಈ ಮೂವರಿಗೆ ಈ ಬಗ್ಗೆ ರಾಷ್ಟ್ರೀಯ ಘಟಕದ ಅನುಮೋದನೆ ಪಡೆಯಲಾಗಿದೆಯೇ ಎಂದು ಸ್ಪಷ್ಟನೆ ನೀಡುವಂತೆ ತಿಳಿಸಲಾಗಿದೆ ಹಾಗೂ ಪಿಯುಸಿಎಲ್ ಹೆಸರಿನಲ್ಲಿ ಹಣ ಸಂಗ್ರಹವನ್ನು ನಿಲ್ಲಿಸುವಂತೆ ತಿಳಿಸಲಾಗಿದೆ. ಹಾಗೆಯೇ ದೇಣಿಗೆ ನೀಡಿದವರ ಸಂಪೂರ್ಣ ಮಾಹಿತಿ ಹಾಗೂ ದೇಣಿಗೆ ಪ್ರಮಾಣವನ್ನು ತಿಳಿಸುವಂತೆಯೂ ಸೂಚನೆ ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಮಾಹಿತಿಯನ್ನು ಈ ಮೂವರು ನೀಡಿಲ್ಲ. ಕೋವಿಡ್ ಕಾರಣದಿಂದಾಗಿ ಮಂಗಳೂರಿಗೆ ರಾಷ್ಟ್ರೀಯ ಘಟಕದ ಪದಾದೀಕರಾರಿಗಳು ಭೇಟಿ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ಮೂಲಕ ಈ ಘಟಕವು ಅನಧಿಕೃತ ಎಂದು ನಾವು ಸ್ಪಷ್ಟನೆ ನೀಡುತ್ತೇವೆ,'' ಎಂದು ವಿವರಿಸಿದೆ.
''ಇನ್ನು ಪಿಯುಸಿಎಲ್ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಕೂಡಾ ಈ ಮೂವರು ಅಧಿಕೃತ ವ್ಯಕ್ತಿಗಳು ಅಲ್ಲ. ಆದ್ದರಿಂದ ಈ ಬಗ್ಗೆ ಬ್ಯಾಂಕುಗಳು ಕೂಡಾ ಕ್ರಮ ಕೈಗೊಳ್ಳಬೇಕು ಎಂದು ಘಟಕ ಮನವಿ ಮಾಡಿದೆ. ಈ ಮೂವರಲ್ಲಿ ಯಾರೂ ಕೂಡಾ ಪಿಯುಸಿಎಲ್ ಮಾಜಿ ಸದಸ್ಯರು ಕೂಡಾ ಅಲ್ಲ,'' ಎಂದು ತಿಳಿಸಿದೆ.
(ಒನ್ ಇಂಡಿಯಾ)












Click it and Unblock the Notifications