ಕಾಲೇಜು ಖರ್ಚಿಗಾಗಿ ನೇರಳೆ ಹಣ್ಣು ಮಾರುವ ಮಂಗಳೂರಿನ ವಿದ್ಯಾರ್ಥಿಗಳ ತಂಡ
ಮಂಗಳೂರು, ಜುಲೈ 09; ಕಾಲೇಜು ಹುಡುಗುರು ಶೈಕ್ಷಣಿಕ ಖರ್ಚಿಗೆ ಪಾರ್ಟ್ ಟೈಮ್ ಆಗಿ ಬೇರೆ ಬೇರೆ ಕೆಲಸ ಮಾಡುತ್ತಾರೆ. ಆದರೆ ಸದ್ಯ ಕೊರೊನಾದಿಂದಾಗಿ ಹೆಚ್ಚಿನವರ ಆರ್ಥಿಕ ಸ್ಥಿತಿಗತಿ ಬುಡಮೇಲಾಗಿದೆ. ಹೀಗಾಗಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳು ನೇರಳೆ ಹಣ್ಣಿನ ವ್ಯಾಪಾರಿಗಳಾಗಿ ಬದುಕಲು ನೂರು ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮಹಾಮಾರಿ ಕೊರೊನಾದಿಂದಾಗಿ ಹೆಚ್ಚಿನವರ ಬದುಕಿನ ಲಯತಪ್ಪಿ ಹೋಗಿದೆ. ಇದರಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವು ಏರು ಪೇರಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳಲ್ಲಿ ಪಾರ್ಟ್ ಟೈಮ್ ಆಗಿ ಕ್ಯಾಟರಿಂಗ್, ಡೆಕೋರೇಷನ್ ವರ್ಕ್ ಸೇರಿದಂತೆ ಇನ್ನಿತರ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.
ಆದರೆ ಕೊರೊನಾ ಮಾಹಾಮಾರಿ ಬಂದ ಬಳಿಕ ಈ ರೀತಿಯ ಕೆಲಸ ಕಾರ್ಯ ಕಡಿಮೆ ಆಗಿದೆ. ಆದರೆ ಇದನ್ನೇ ನಂಬಿ ಕಾಲೇಜು ಫೀಸ್, ಶೈಕ್ಷಣಿಕ ಖರ್ಚನ್ನು ತಾವೇ ಸ್ವತ ಬರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಇದಕ್ಕಾಗಿ ಮಂಗಳೂರಿನ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡವೊಂದು ನಗರದಲ್ಲಿ ನೇರಳೆ ಹಣ್ಣಿನ ವ್ಯಾಪಾರ ನಡೆಸುತ್ತಿದ್ದಾರೆ.

ಈ ಬಾರಿಯ ಲಾಕ್‌ಡೌನ್ ಆದಾಗಿನಿಂದಲೂ ಮಂಗಳೂರಿನಲ್ಲಿ ಕಲಿಯುತ್ತಿರುವ ಕಾಲೇಜು ಹುಡುಗರು ಈ ಕೆಲಸ ಮಾಡುತ್ತಿದ್ದಾರೆ. ನಗರದ ಬೀದಿ ಬದಿಯಲ್ಲಿ ಕಾಣ ಸಿಗುತ್ತಿರುವ ಇವರು ನೇರಳೆ ಹಣ್ಣು ಮಾರುತ್ತಿದ್ದಾರೆ. ಮಂಗಳೂರಿನಲ್ಲಿ ನೇರಳೆ ಹಣ್ಣಿಗೆ ಉತ್ತಮ ಬೇಡಿಕೆಯಿದ್ದು ಪ್ರಾರಂಭದಲ್ಲಿ ಕೆಜಿಗೆ 400 ರೂ. ಬೆಲೆಯಿತ್ತು.
ಸದ್ಯ ಬೆಲೆ ಕಡಿಮೆಯಿದ್ದು ಕೆಜಿ ಒಂದಕ್ಕೆ 200ರಂತೆ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವುದರಿಂದ ಹೆಚ್ಚಿನವರು ಬಂದು ಈ ಯುವಕರ ತಂಡದಿಂದ ಖರೀದಿ ಮಾಡುತ್ತಿದ್ದಾರೆ. ಈ ಸ್ಟೂಡೆಂಟ್ಸ್ ಟೀಂಗೆ ಸತೀಶ್ ಪ್ರಭು ಎಂಬವರು ಗೋವಾ, ಆಂಧ್ರ ಪ್ರದೇಶ, ಬೆಳಗಾವಿಯಿಂದ ಈ ನೇರಳೆ ಹಣ್ಣನ್ನು ತರಿಸಿ ಕೊಡುತ್ತಿದ್ದಾರೆ.

ಸದ್ಯ ಕಾಲೇಜು ಶುರುವಾಗದೇ ಇದ್ದರೂ ಸಹ ಕಾಲೇಜು ಆರಂಭ ಬಳಿಕ ಕಾಲೇಜು ಫೀಸೆಲ್ಲಾ ಕಟ್ಟಬೇಕಾಗಿದೆ. ಹೀಗಾಗಿ ಶೈಕ್ಷಣಿಕ ಖರ್ಚಿಗಾಗಿ ಈ ವಿದ್ಯಾರ್ಥಿಗಳು ಸ್ವತ ತಾವೇ ದುಡಿದು ಹಣ ಒಟ್ಟು ಸೇರಿಸುತ್ತಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications