Solar Eclipse 2022 : ಸೂರ್ಯಗ್ರಹಣ; ಧರ್ಮಸ್ಥಳ, ಕುಕ್ಕೆ ಸಹಿತ ಕರಾವಳಿ ದೇವಸ್ಥಾನಗಳ ದರ್ಶನ ಸಮಯ ಬದಲಾವಣೆ
ಮಂಗಳೂರು, ಅಕ್ಟೋಬರ್, 21: ದೀಪಾವಳಿ ದಿನದಂದೇ ಸೂರ್ಯಗ್ರಹಣ ಬರಲಿದ್ದು, ಈ ಹಿನ್ನೆಲೆ ಕರಾವಳಿಯ ಹಲವು ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ. ಆಕ್ಟೋಬರ್ 25ರ ಮಂಗಳವಾರದಂದು ಸೂರ್ಯಗ್ರಹಣ ಆವರಿಸಲಿದೆ. ಗ್ರಹಣ ಆರಂಭ ಕಾಲದಿಂದ ಗ್ರಹಣ ಮೋಕ್ಷದವರೆಗೂ ದೇವಸ್ಥಾನಗಳಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಆಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರದಂದು ಮಧ್ಯಾಹ್ನದವರೆಗೆ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿದ್ದು, ಬಳಿಕ ಮಧ್ಯಾಹ್ನ 2:30ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅನ್ನಸಂತರ್ಪಣೆ ಛತ್ರದಲ್ಲಿ ಮಧ್ಯಾಹ್ನ 2:30ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆಯನ್ನು ಹೊರಡಿಸಿದೆ.
Solar Eclipse 2022: ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ? ಕಾಲಾವಧಿ ವಿವರ
ಇನ್ನು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಗ್ರಹಣ ಪ್ರಯುಕ್ತ ದರ್ಶನಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 25ರಂದು ದೇವಸ್ಥಾನ ಇಡೀ ದಿನ ಬಾಗಿಲು ಮುಚ್ಚಲಿದೆ. ಆ ದಿನ ದೇವಸ್ಥಾನದಲ್ಲಿ ಯಾವುದೇ ಸೇವೆಗಳು, ಭೋಜನ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 26ರ ಬೆಳಗ್ಗೆ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂಜಾ ಸೇವೆಗಳು, ದೇವರ ದರ್ಶನ ಆರಂಭಗೊಳ್ಳಲಿದೆ ಎನ್ನುವ ಮಾಹಿತಿಯನ್ನು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವರ ದರ್ಶನದ ಸಮಯ ಬದಲಾವಣೆ
ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರಾಧ್ಯ ದೇವರಾದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸೂರ್ಯ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನ ಎಂದಿನಂತೆ ದೇವಸ್ಥಾನದಲ್ಲಿ ಅನ್ನ ಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಮೋಕ್ಷದ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಸ್ಥಾನದಲ್ಲಿ ಜಪಮಾಡಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣ ಮಾಹಿತಿಯನ್ನು ನೀಡಿದ್ದಾರೆ.
Breaking: ಅ.25 ರಂದು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸೇವೆ ಬಂದ್

ಅಭಿಷೇಕ ನಡೆಯಲಿರುವ ಸಮಯ
ಕಟೀಲು ದೇವಸ್ಥಾನದಲ್ಲಿ ದೇವಿ ಲಿಂಗ ಸ್ವರೂಪಿ ಆಗಿರುವುದರಿಂದ ಅಕ್ಟೋಬರ್ 25ರಂದು ಸಂಜೆ 5:08ಕ್ಕೆ ಸೂರ್ಯಗ್ರಹಣ ಆರಂಭ ಗೊಂಡ ಅವಧಿಯಿಂದ ಮಧ್ಯಕಾಲ 5:51ರವರೆಗೆ ನಿರಂತರ ಅಭಿಷೇಕ ನಡೆಯಲಿದೆ. ಬಳಿಕ ಸಂಜೆ 6:29ರ ಮೋಕ್ಷ ಕಾಲದವರೆಗೆ ಪುನಃ ನಿರಂತರ ದೇವರಿಗೆ ಅಭಿಷೇಕ ನಡೆಯಲಿದ್ದು, ಮೋಕ್ಷದ ಬಳಿಕ ದೇವರಿಗೆ ಪೂಜೆ ಜರುಗಲಿದೆ. ಗ್ರಹಣದ ಅವಧಿಯಲ್ಲಿ ಭಕ್ತರು ದೇವರಿಗೆ ತುಪ್ಪವನ್ನು ನೀಡಬಹುದು. ಭಕ್ತಾದಿಗಳು ದೇವರ ದೀಪಕ್ಕೆ ಶುದ್ಧ ಅರಳೆಣ್ಣೆ, ತುಪ್ಪ, ಬತ್ತಿ ಸಮರ್ಪಿಸುವುದರಿಂದ ಗ್ರಹಣ ದೋಷ ತೊಲಗಿ ಅನುಗ್ರಹ ಪ್ರಾಪ್ತಿ ಆಗುತ್ತದೆ. ರಾತ್ರಿ ಅನ್ನ ಪ್ರಸಾದ ಇರುವುದಿಲ್ಲ. ಬದಲಿಗೆ ಫಲಾಹಾರ ಇರುತ್ತದೆ ಎಂದು ಅರ್ಚಕ ಶ್ರೀಹರಿನಾರಾಯಣ ತಿಳಿಸಿದ್ದಾರೆ.

ಸಂಜೆ 6:45ರ ಬಳಿಕ ಜರುಗಲಿರುವ ಪೂಜೆ
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೂರ್ಯ ಗ್ರಹಣದ ದಿನದಂದು ಸಂಜೆ 4:45ರಿಂದ 6:45ರವರೆಗೆ ಯಾವುದೇ ಪೂಜೆ, ಸೇವೆ, ಪ್ರಸಾದ ವಿತರಣೆ ಇರುವುದಿಲ್ಲ. ಸಂಜೆ 6:45ರ ಬಳಿಕ ನಿತ್ಯ ಪೂಜೆ ಜರುಗಲಿದೆ. ಆದರೆ ಅಂದು ಮಧ್ಯಾಹ್ನ ಅನ್ನ ಪ್ರಸಾದ ಇರುವುದಿಲ್ಲ ಎಂದು ತಿಳಿಸಲಾಗಿದೆ. ಸೂರ್ಯಗ್ರಹಣದ ಹಿನ್ನೆಲೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆ ಇರುವುದಿಲ್ಲ.

ಸಂಜೆ 6:29ಕ್ಕೆ ಮೋಕ್ಷವಾಗಲಿರುವ ಗ್ರಹಣ
ಆದರೆ ಸಾರ್ವಜನಿಕರಿಗೆ ಕೃಷ್ಣ ದರ್ಶನಕ್ಕೆ ಅವಕಾಶ ಇರುತ್ತದೆ. ಕೃಷ್ಣಮಠದ ಸಂಪ್ರದಾಯದಂತೆ ಉಡುಪಿಯಲ್ಲಿ ಆಕ್ಟೋಬರ್ 25ರಂದು ಬೆಳಗ್ಗೆ ಗೋಪೂಜೆ ನಡೆಯಲಿದೆ. ಅಕ್ಟೋಬರ್ 26ರಂದು ಬಲಿಪಾಡ್ಯ, ಸಂಜೆ ಅಂಗಡಿ ಪೂಜೆ, ತುಳಸಿ ಪೂಜೆಗಳು ನಡೆಯಲಿವೆ. ಉಡುಪಿಯಲ್ಲಿ ಸಂಜೆ 5:08ರ ವೇಳೆಗೆ ಗ್ರಹಣ ಸ್ಪರ್ಶವಾಗಿ, ಸಂಜೆ 6:29ರ ವೇಳೆಗೆ ಗ್ರಹಣ ಮೋಕ್ಷವಾಗಲಿದೆ ಎಂದು ತಿಳಿಸಲಾಗಿದೆ.