ಮಂಗಳೂರು: ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ವಾರಸುದಾರ, ಮುಂದೇನಾಯ್ತು ನೋಡಿ
ಮಂಗಳೂರು, ಜುಲೈ, 18: ದೇವಸ್ಥಾನ, ಊರಜಾತ್ರೆ, ಜನಜಂಗುಳಿ ಇರುವಲ್ಲಿ ಚಪ್ಪಲಿ ಕಳವಾಗುವುದು ಮಾಮೂಲಿ. ಹಾಗೆಯೇ ವಾರಸುದಾರರು ತಮ್ಮ ಚಪ್ಪಲಿ ಹುಡುಕಾಡಿ ಸಿಗದೆ ಕೊನೆಗೆ ಬೇಸತ್ತು ಬರಿಗಾಲಲ್ಲೇ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಭೂಪ ತನ್ನ ಚಪ್ಪಲಿ ಕಳುವಾಗಿದೆ ಎಂದು 112ಗೆ ಕರೆ ಮಾಡಿ ಪೊಲೀಸ್ ಕರೆಸಿ ಹುಡುಕಾಡುವಂತೆ ಮಾಡಿದ ಘಟನೆ ಮಂಗಳೂರಿನ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ನಡೆದಿದೆ.
ಮೊನ್ನೆ ರವಿವಾರ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಸಭಾಂಗಣದಲ್ಲಿ ಸಾವಯವ ಕೃಷಿ, ಉತ್ಪನ್ನಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವಿತ್ತು. ಆದ್ದರಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಜನ ಸೇರಿದ್ದರು. ಹಾಗೆಯೇ ಅಲ್ಲಿಗೆ ಬಂದಿರುವವರೊಬ್ಬರ ಚಪ್ಪಲಿ ಕಾಣೆಯಾಗಿದೆ. ಅವರು ಹುಡುಕಾಟ ನಡೆಸಿ ಚಪ್ಪಲಿ ಕಾಣದಿದ್ದಾಗ 112ಗೆ ಕರೆ ಮಾಡಿದ್ದಾರೆ. ನಂತರ ದೂರು ಪರಿಶೀಲನೆ ನಡೆಸುವಂತೆ ಬಂದರು ಠಾಣೆಗೆ ಸಂದೇಶ ಬಂದಿದೆ.

ಅದರಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಚಪ್ಪಲಿ ಹುಡುಕಾಟಕ್ಕೆ ಬಾಳಂಭಟ್ ಹಾಲ್‌ಗೆ ಬಂದಿದ್ದಾರೆ. ಚಪ್ಪಲಿ ಕಳೆದುಕೊಂಡಿರುವ ವ್ಯಕ್ತಿ ತನ್ನ ಚಪ್ಪಲಿಯನ್ನು ಯಾರೋ ಹಾಕಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾನೆ.
ತಕ್ಷಣ ಪೊಲೀಸರು ಬಾಳಂಭಟ್ ಸಭಾಂಗಣದ ಮುಂಭಾಗದ ಸಿಸಿಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಯುವಕನೊಬ್ಬ ಆ ಚಪ್ಪಲಿ ಹಾಕಿಕೊಂಡು ಹೋಗಿರುವುದು ಪತ್ತೆಯಾಗಿದೆ. ಈ ವೇಳೆ ಚಪ್ಪಲಿ ಕಳೆದುಕೊಂಡವರನ್ನು ಬಂದರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲು ಹೇಳಿದಾಗ ಅವರು ಅದಕ್ಕೆ ನಿರಾಕರಿಸಿದ್ದಾರೆ. ಬಳಿಕ ಪೊಲೀಸರು ಅಲ್ಲಿಂದ ಮರಳಿದ್ದಾರೆ. ಆದರೆ ಚಪ್ಪಲಿ ಕಳವಿನಂತಹ ಸಣ್ಣ ಪುಟ್ಟ ವಿಚಾರಕ್ಕೂ ಪೊಲೀಸ್ ಸ್ಪಂದನೆ ನಿಜಕ್ಕೂ ಮೆಚ್ಚುವಂತದ್ದಾಗಿದೆ.
ಸಾಮಾನ್ಯವಾಗಿ ಕೆಲವರು ಹೆಚ್ಚಿದ ದರ ಇದ್ದರೂ ಕೂಡ ಇಷ್ಟಪಟ್ಟ ಚಪ್ಪಲಿಗಳನ್ನು ಮಾತ್ರ ಖರೀದಿ ಮಾಡಿಯೇ ತಂದಿರುತ್ತಾರೆ. ಸಾಲ ಮಾಡಿಯಾದರೂ ತಾವು ಇಷ್ಟಪಟ್ಟ ಚಪ್ಪಲಿಗಳನ್ನು ಕೊಂಡುಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇಂತಹ ಚಪ್ಪಲಿಗಳನ್ನೇ ಯಾರಾದರೂ ಕದ್ದುಬಿಟ್ಟರೆ ಮನಸ್ಸಿಗೆ ತುಸು ನೋವಾದೇ ಆಗುತ್ತದೆ. ಯಾಕಂದರೆ ಅಷ್ಟು ಇಷ್ಟಪಟ್ಟು ಆ ಚಪ್ಪಲಿಗಳನ್ನು ಖರೀದಿ ಮಾಡಿ ತಂದಿರುತ್ತಾರೆ.












Click it and Unblock the Notifications