ಮಂಗಳೂರು : ನೂತನ ಕಾಂಗ್ರೆಸ್ ಕಚೇರಿಗೆ ಏ.24ಕ್ಕೆ ಶಂಕುಸ್ಥಾಪನೆ
ಮಂಗಳೂರು ಏ.22 : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದ ಶಂಕುಸ್ಥಾಪನೆ ಸಮಾರಂಭ ಏ.24ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು. ಏ.24ರ ಶುಕ್ರವಾರ ಸಂಜೆ 4 ಗಂಟೆಗೆ ಶಂಕುಸ್ಥಾಪನೆ ಸಮಾರಂಭ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ಮಾಜಿ ಕೇಂದ್ರ ಎಂ. ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಬಿ. ಜನಾರ್ದನ ಪೂಜಾರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಬಳಿ ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣವಾಗಲಿದೆ. ಈ ಭವನವು ಕಚೇರಿ, ಮೀಟಿಂಗ್ ಹಾಲ್, ಮಾಧ್ಯಮ ಕೇಂದ್ರ ಸೇರಿದಂತೆ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಕಚೇರಿ ನಿರ್ಮಾಣ ಮಾಡುವುದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಬಹುದಿನದ ಕನಸಾಗಿತ್ತು ಎಂದರು.
ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ವಿನಯ ಕುಮಾರ್ ಸೊರಕೆ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಮಂಗಳೂರು ಮೇಯರ್, ಶಾಸಕರಾದ ಜೆ.ಅರ್.ಲೋಬೊ, ವಸಂತ ಬಂಗೇರ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಪೌರಿಸ್ ರೋಡಿಗ್ರಸ್, ಟಿ.ಕೆ. ಸುಧೀರ್, ವಿಶ್ವಾಸ್ ದಾಸ್, ನಾಗೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications