ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆಯಾಗುವುದಿಲ್ಲ
ಮಂಗಳೂರು, ಫೆ. 12 : ಶಿರಾಡಿ ಘಾಟ್ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಸದ್ಯ ಕೇವಲ ಕಾಂಕ್ರೀಟಿಕರಣ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿ ಬುಧವಾರ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆ ಕಾಮಗಾರಿಯನ್ನು ಮಾತ್ರ ಕೈಗೊಂಡಿದ್ದು 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು. [ಶಿರಾಡಿ ರಸ್ತೆ ರಿಪೇರಿಗೆ ಇನ್ನೆಷ್ಟು ದಿನ ಬೇಕು?]

ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯ 237 ರಿಂದ 250 ಕಿ.ಮೀ.ವರೆಗಿನ ರವರೆಗೆ ಒಟ್ಟು 13.62 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆ ಮಾಡುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಸುಮಾರು 69 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. [ಶಿರಾಡಿ ಬಂದ್, ಪರ್ಯಾಯ ಮಾರ್ಗಗಳು]
ಇದೇ ರಸ್ತೆಯ 250 ರಿಂದ 263.00ವರೆಗಿನ ಒಟ್ಟು 12.38 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲಾಗುತ್ತದೆ. ಈ ಕಾಮಗಾರಿಗೆ ಸುಮಾರು 85.28 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು. ಒಟ್ಟು ಎರಡೂ ಕಾಮಗಾರಿಗೆ ಸೇರಿ 155.24 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದರು. [ಅರ್ಧದಿನ ಅಧಿವೇಶನದಲ್ಲಿರುವ ಶಾಸಕರಿಗೆ ಪೂರ್ಣ ವೇತನ]
ಕೇವಲ ಕಾಂಕ್ರೀಟಿಕರಣ ಕಾಮಗಾರಿಯನ್ನು ಮಾತ್ರ ಮಾಡಲಾಗುತ್ತಿದೆ. ಶಿರಾಡಿ ಘಾಟ್ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಚಿವ ಮಹದೇವಪ್ಪ ಸ್ಪಷ್ಟಪಡಿಸಿದರು.












Click it and Unblock the Notifications