ನನ್ನ ಹತ್ಯೆಯಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಘ ಪರಿವಾರದ ಪ್ರಮುಖರೇ ಹೊಣೆ
ಮಂಗಳೂರು, ಏಪ್ರಿಲ್ 21: ಚುನಾವಣಾ ನೆಪವೊಡ್ಡಿ ತನ್ನ ಭದ್ರತಾ ಸಿಬ್ಬಂದಿ ಹಾಗೂ ವೈಯುಕ್ತಿಕ ರಿವಾಲ್ವರ್‌ಅನ್ನು ಪೊಲೀಸ್ ಇಲಾಖೆ ಹಿಂಪಡೆದಿರುವ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡವಿದೆ. ಆದ್ದರಿಂದ ನನ್ನ ಹತ್ಯೆಯಾದಲ್ಲಿ ನೇರ ಅವರು ಹಾಗೂ ಸಂಘ ಪರಿವಾರದ ಪ್ರಮುಖರೇ ಹೊಣೆ ಎಂದು ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಮೂಲಭೂತವಾದಿಗಳ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಳೆದ 16 ವರ್ಷಗಳ ಹಿಂದೆ ಸರಕಾರವೇ ಗನ್ ಮ್ಯಾನ್ ಒದಗಿಸಿತ್ತು. ವೈಯಕ್ತಿಕ ರಿವಾಲ್ವರ್‌ಅನ್ನು ನೀಡಲಾಗಿತ್ತು. ಆದರೆ ಇಷ್ಟರವರೆಗೆ ಹಿಂಡೆಯದ ಭದ್ರತಾ ವ್ಯವಸ್ಥೆ ಹಾಗೂ ರಿವಾಲ್ವರ್ ಈ ಬಾರಿ ಹಿಂಪಡೆಯಲಾಗಿದೆ ಎಂದಿದ್ದಾರೆ.

ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತರ ಮಾಡಲಾಗಿದೆ. ಗೃಹ ಸಚಿವರವರೆಗೆ ಒತ್ತಡ ಹಾಕಿದ್ದರೂ ಪೊಲೀಸ್ ಭದ್ರತೆ ಹಿಂಡೆಯಲಾಗಿದೆ ಎಂದರೆ ಅದಕ್ಕೆ ಬಿಜೆಪಿ ರಾಜ್ಯಧ್ಯಕ್ಷರೇ ನೇರ ಕಾರಣ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ.
ಕಾರ್ಯಕರ್ತರಿಂದ ಬೆದರಿಕೆಯಿದೆ, ಕಾರ್ಯಕರ್ತರು ವಾಹನ ಹಿಡಿದು ಅಲ್ಲಾಡಿಸಿರುದ್ದಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಹೊಂದಿರುವವರು ಇದ್ದಾರೆ. ಇವರ ಭದ್ರತೆ ವಾಪಸ್ ಪಡೆದಿಲ್ಲ. ಆದರೆ ಯಾರಿಗೆ ಸಮಾಜ ವಿರೋಧಿ ಶಕ್ತಿಗಳ ಬೆದರಿಕೆಯಿರುವವರ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ. ಹಿಂದೂ ಸಂಘಟನೆಯಲ್ಲಿರುವವರು ಇವರ ನಿರ್ಣಯದ ವಿರುದ್ಧ ಸ್ವರ ಎತ್ತಬಾರದೆಂಬ ಹಿನ್ನೆಲೆಯಲ್ಲಿ ಪ್ರಮುಖರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಮೌನವಾಗಿಸುವ ಷಡ್ಯಂತರ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ತನ್ನ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಪ್ರಾಣ ಭಯವನ್ನು ಒಡ್ಡುವ ಮೂಲಕ ಪರೋಕ್ಷವಾಗಿ ಬಾಯಿ ಮುಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕದ ವ್ಯವಸ್ಥೆ ನನ್ನ ಹತ್ಯೆಗೆ ಪ್ರೇರಣೆ ಕೊಡುವ ಮುಕ್ತ ಅವಕಾಶವನ್ನು ಮಾಡುತ್ತಿದೆ. ಅಕಸ್ಮಾತ್ ಆಗಿ ದುಷ್ಕರ್ಮಿಗಳಿಂದ ನನ್ನ ಬಲಿಯಾದರೆ, ಯಾವುದೇ ಸಂಘಪರಿವಾರದ ನಾಯಕರು ನನ್ನ ಅಂತಿಮ ದರ್ಶನಕ್ಕೆ ಬರಬಾರದು. ಯಾವುದೇ ಕಾರಣಕ್ಕೆ ಮೃತದೇಹದ ಮೆರವಣಿಗೆಯನ್ನೂ ನಡೆಸಬಾರದು ಎಂದು ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೊತೆಯಲ್ಲಿಯೇ ಹೋರಾಟ ಮಾಡಿದ ಅನಂತ ಕುಮಾರ್ ಹೆಗ್ಡೆ, ರಾಜಕೀಯ ಪ್ರವೇಶಿಸಿ ಕೇಂದ್ರ ಸಚಿವರಾದರು. ಸಂಸದರೂ ಆಗಿದ್ದಾರೆ. ಆದರೆ ಇದೀಗ ಅವರನ್ನು ತುಳಿಯುವಂತಹ ಕೆಲಸ ನಡೆಯುತ್ತಿದೆ ಎಂದು ಹೇಳಿದರು.












Click it and Unblock the Notifications