ಧರ್ಮಸ್ಥಳ; ಕಡವೆಗೆ ವಾಹನ ಡಿಕ್ಕಿ, ಸ್ಥಳೀಯರಿಂದ ರಕ್ಷಣೆ
ಮಂಗಳೂರು, ಜೂನ್ 17; ಆಹಾರ ಅರಸಿ ನಾಡಿಗೆ ಬಂದ ಕಡವೆಗೆ ವಾಹನ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ನಡೆದಿದೆ.
ನೇತ್ರಾವತಿ ನದಿ ಸ್ನಾನ ಘಟ್ಟ ಸಮೀಪದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ಹೆಣ್ಣು ಕಡವೆಗೆ ವಾಹನ ಡಿಕ್ಕಿಯಾಗಿದೆ. ಕಡವೆಗೆ ಡಿಕ್ಕಿ ಯಾದರೂ ವಾಹನವನ್ನು ನಿಲ್ಲಿಸದೇ ತೆರಳಿದ್ದಾರೆ.
ಅಫಘಾತದ ತೀವ್ರತೆಗೆ ಕಡವೆಯ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಸ್ಥಳದಲ್ಲೇ ಸುಮಾರು ಹೊತ್ತು ನರಳಾಡಿದೆ. ಸ್ಥಳೀಯರ ಮಾಹಿತಿಯ ಹಿನ್ನಲೆಯಲ್ಲಿ ಉರಗ ರಕ್ಷಕ ಸ್ನೇಕ್ ಪ್ರಕಾಶ್ ಕಡವೆಯ ಆರೈಕೆ ಮಾಡಿದ್ದಾರೆ.

ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ. ಉಜಿರೆಯ ಇಚ್ಚಿಲ ಪಶು ಚಿಕಿತ್ಸಾಲಯದಲ್ಲಿ ಕಡವೆಗೆ ಚಿಕಿತ್ಸೆ ನೀಡಲಾಗಿದ್ದು, ಸ್ಥಳೀಯರ ನೆರವಿನಿಂದ ಕಡವೆ ಬದುಕುಳಿದಿದೆ.
ಬೆಳ್ತಂಗಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿ ಬೇಟೆ ನಡೆಯುತ್ತಿದ್ದು, ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸಲಾಗಿದೆ.

ಬೇಟೆಯ ಸಂಧರ್ಭದಲ್ಲಿ ಭಯದಿಂದ ಗುಂಪಿನಲ್ಲಿದ್ದ ಕಡವೆ ಈಗ ಪ್ರತ್ಯೇಕವಾಗಿ ರಸ್ತೆಯ ಬದಿಗೆ ಬಂದಿದೆ. ಸಾಮಾನ್ಯವಾಗಿ ಗುಂಪಿನಲ್ಲಿರುವ ಕಡವೆಗಳು, ಒಂಟಿಯಾಗಿರಲು ಸಾಧ್ಯವಿಲ್ಲ. ಬೇಟೆಗಾರರ ಭಯದಿಂದ ಓಡಿ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.












Click it and Unblock the Notifications