ಮಂಗಳೂರು : ತುರ್ತಾಗಿ ರಕ್ತ ಬೇಕೆ, ವೆಬ್ ಸೈಟ್ ನೋಡಿ
ಮಂಗಳೂರು, ಜೂ. 16 : ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರು ಸಂಪರ್ಕಿಸಲು ಮತ್ತು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಹೆಸರು ನೋಂದಾಯಿಸಲು ವೆಬ್ ಸೈಟ್ ವೊಂದನ್ನು ಆರಂಭಿಸಲಾಗಿದೆ. ರೋಟರಿ ಮಂಗಳೂರು ಹಿಲ್‌ಸೈಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಈ ವೆಬ್ ಸೈಟ್ ತೆರೆಯಲಾಗಿದೆ.
ಭಾನುವಾರ ನಡೆದ ಸಮಾರಂಭದಲ್ಲಿ ಶಾಸಕ ಜೆ.ಆರ್. ಲೋಬೋ http://www.rakthadaan.com/ ವೆಬ್ ಸೈಟ್ ಅನ್ನು ಉದ್ಘಾಟಿಸಿದರು. ಸ್ವಯಂಪ್ರೇರಿತ ರಕ್ತದಾನಕ್ಕೆ ಹೆಸರು ನೋಂದಾಯಿಸಲು ಮತ್ತು ತುರ್ತು ಸಂದರ್ಭದಲ್ಲಿ ರಕ್ತದ ಅವಶಕ್ಯಕತೆ ಇರುವವರು ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ನಳೀನ್ ಕುಮಾರ್ ಕಟೀಲು, ರಕ್ತದಾನ ಮಾಡಲು ಬಯಸುವ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಜೋಡಿಸುವ ಕಾರ್ಯ ಆಗಬೇಕಾಗಿದೆ. ರಕ್ತದಾನ್ ಡಾಟ್ ಕಾಂ. ವೆಬ್ ಸೈಟ್ ಈ ನಿಟ್ಟಿನಲ್ಲಿ ಪೂರಕವಾಗಿದೆ ಎಂದು ಹೇಳಿದರು. [ರಕ್ತದಾನ ಮಾಡುವುದರಿಂದ ಲಾಭಗಳೇನು?]
ರೋಟರಿ ಮಂಗಳೂರು ಹಿಲ್‌ಸೈಡ್ ಸಂಸ್ಥೆಯ ಗೀತಾನಂದ ಪೈ ಅವರು ಮಾತನಾಡಿ, ವೆಬ್ ಸೈಟ್ ಮೂಲಕ ಮುಂದಿನ 4 ತಿಂಗಳೊಳಗೆ 1 ಲಕ್ಷ ರಕ್ತದಾನಿಗಳ ಹೆಸರು ನೋಂದಾಯಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ರಕ್ತದಾನಕ್ಕೆ ನೋಂದಣಿ ಮಾಡಿದವರ ಹೆಸರು ಮತ್ತು ವಿಳಾಸಗಳನ್ನು ಗುಪ್ತವಾಗಿಡಲಾಗುತ್ತದೆ ಎಂದರು.
ನೋಂದಣಿ ಮಾಡುವುದು ಹೇಗೆ : ವೆಬ್ ಸೈಟ್ ಬಗ್ಗೆ ಮಾಹಿತಿ ನೀಡಿದ ಗೀತಾನಂದ ಪೈ ಅವರು, ರಕ್ತದಾನ ಮಾಡಲು ಬಯಸುವವರು ವೆಬ್ ಸೈಟ್ ಗೆ ಭೇಟಿ ನೀಡಿ, ತಮ್ಮ ಪೂರ್ಣ ಹೆಸರು, ವಯಸ್ಸು, ಲಿಂಗ, ರಕ್ತದ ಗುಂಪು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಮನೆ ವಿಳಾಸಗಳನ್ನು ಮೊದಲು ನೋಂದಣಿ ಮಾಡಬೇಕು ಎಂದು ಹೇಳಿದರು.
ರಕ್ತದ ಅವಶ್ಯಕತೆ ಇರುವವರು ವೆಬ್ ಸೈಟ್ ಮೂಲಕ ರಕ್ತಕ್ಕೆ ಬೇಡಿಕೆ ಸಲ್ಲಿಸಿದಾಗ ನೋಂದಣಿ ಮಾಡಿಕೊಂಡವರಲ್ಲಿ ಆ ರಕ್ತದ ಗುಂಪು ಹೊಂದಿರುವ 10 ಜನರಿಗೆ ಸ್ವಯಂ ಆಗಿ ಎಸ್‌ಎಂಎಸ್ ಸಂದೇಶ ರವಾನೆಯಾಗುತ್ತದೆ. ಅವರಿಂದ 10ರಿಂದ 15 ನಿಮಿಷಗಳಲ್ಲಿ ಉತ್ತರ ಬರದಿದ್ದರೆ, ಪುನಃ 10 ಮಂದಿಗೆ ಸಂದೇಶ ಹೋಗುತ್ತದೆ.












Click it and Unblock the Notifications