ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳ; ಮಂಗಳೂರಿನಲ್ಲಿ ಸಿಟಿ ಬಸ್ ಮಾಲೀಕರಿಗೆ ಪೊಲೀಸ್ ಕಮಿಷನರ್ ಖಡಕ್ ವಾರ್ನ್
ಮಂಗಳೂರು, ಸೆಪ್ಟೆಂಬರ್, 27: ಜೀವಕಂಟಕವಾಗುತ್ತಿರುವ ಸಿಟಿ ಬಸ್‌ಗಳ ಆಟಾಟೋಪಗಳಿಗೆ ಕಡಿವಾಣ ಹಾಕಲು ಬಸ್ ಮಾಲಕರೊಂದಿಗೆ ಸಭೆ ನಡೆಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆರ್‌ಟಿಒ ಅಧಿಕಾರಿ, ಮನಪಾ ಇಂಜಿನಿಯರ್, ಎನ್ಎಚ್ಒ ಅಧಿಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಿಟಿ ಬಸ್‌ಗಳ ಮಾಲೀಕರೊಂದಿಗೆ ಸಭೆ ನಡೆಸಲಾಗಿದೆ. ಬಸ್ ಮಾಲಕರೊಂದಿಗೆ ಬಹಳಷ್ಟು ಸಭೆಗಳು ನಡೆದಿದ್ದರೂ, ಇದೇ ಮೊದಲ ಬಾರಿಗೆ ಕಳೆದ ಕೆಲ ದಿನಗಳಲ್ಲಿ ನಡೆದಿರುವ ಅಪಘಾತಗಳನ್ನು, ಅಡ್ಡಾದಿಡ್ಡಿ ಬಸ್‌ಗಳ ಸಂಚಾರ, ನಿರ್ಲಕ್ಷ್ಯದ ಚಾಲನೆಗಳ ಬಗ್ಗೆ ವೀಡಿಯೋ ಮೂಲಕ ಮನದಟ್ಟು ಮಾಡಲಾಯಿತು.

ಇತ್ತೀಚಿಗೆ ನಡೆದ ವಿವಿಧ ಭೀಕರ ಅಪಘಾತಗಳ ವೀಡಿಯೋಗಳನ್ನು ತೋರಿಸಿ ಬಸ್ ಮಾಲೀಕರಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡರು. ಅತೀ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಟೈಮ್ ಕೀಪಿಂಗ್ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿ, ಬಸ್ ಟೈಮಿಂಗ್ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಬಸ್ ಮಾಲಕರು ತಮ್ಮ ಚಾಲಕ ಹಾಗೂ ನಿರ್ವಾಹಕರಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಚಾಲಕರ ಚಾಲನ ಪರವಾನಿಗೆ ರದ್ದು ಮಾಡಲಾಗುವುದು. ಈ ವರ್ಷ ಸುಮಾರು 90 ಮಂದಿಯ ಚಾಲನ ಪರವಾನಿಗೆ ರದ್ದು ಮಾಡಲಾಗಿದೆ. ಮುಂದೆ ಪರಿಸ್ಥಿತಿ ಇದೆ ರೀತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಫುಟ್ ಬೋರ್ಡ್ ಮೇಲೇ ಪ್ರಯಾಣಿಕರು ನಿಲ್ಲಲು ಅವಕಾಶ ನೀಡಬಾರದು. ಫುಟ್ ಬೋರ್ಡ್‌ಗೆ ಬಾಗಿಲು ಹಾಕುವ ಬಗ್ಗೆ ಚಿಂತನೆ ನಡೆಸಬೇಕು. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಬಸ್ ಮಾಲಕರಿಗೆ ಅವಶ್ಯವಿರುವ ಕಡೆಗೆ ನಾವೇ ಹೋಂ ಗಾರ್ಡ್ಸ್ ವ್ಯವಸ್ಥೆ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಅಲ್ಲದೆ ರಸ್ತೆ ಕಾಮಗಾರಿಯಿಂದಾಗಿ ಅಪಘಾತ ಸಂಭವಿಸಿದ್ದು ಸಾಬೀತಾದರೆ ಆ ಕಾಮಗಾರಿ ನಡೆಸುತ್ತಿರುವ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಭೆಯಲ್ಲಿ ಚರ್ಚಿಸಲಾಗಿರುವ ವಿವಿಧ ಸಮಸ್ಯೆಗಳು ಪರಿಹಾರ ಕಾಣುವಂತಾಗಬೇಕು. ಮುಂದಿನ ತಿಂಗಳು ಮತ್ತೆ ಸಭೆ ಕರೆದು ಪರಿಶೀಲಿಸಲಾಗುವುದು. ಆದ್ದರಿಂದ ಆದಷ್ಟು ಶೀಘ್ರ ಇಂದು ನಿರ್ಣಯಿಸಿದ ವಿಚಾರ ತುರ್ತು ಕಾರ್ಯರೂಪಕ್ಕೆ ಬರುವಂತಾಗಬೇಕು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ.












Click it and Unblock the Notifications