ವಿಟ್ಲದಲ್ಲಿ ಬಾಲಕಿ ಮೇಲೆ ಅತ್ಯಾಚಾರ; ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ
ಮಂಗಳೂರು, ಜುಲೈ 9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಗ್ರಾಮ ಪಂಚಾಯತ್ ನ ಸಿಬ್ಬಂದಿ ಸೇರಿದಂತೆ ನಾಲ್ವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬೇರೆ ಬೇರೆ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 17ರ ಪ್ರಾಯದ ಸಂತ್ರಸ್ತ ಬಾಲಕಿ ಇದೀಗ ಗರ್ಭವತಿಯಾಗಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಸಮೀಪದ ಗ್ರಾಮವೊಂದರ ನಿವಾಸಿಯಾಗಿರುವ ಬಾಲಕಿ ಮೇಲೆ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅತ್ಯಾಚಾರ ನಡೆಸಲಾಗಿದೆ, ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದ ಈಕೆ ಮೇಲೆ ಗಣೇಶ್, ಕೃಷ್ಣಪ್ಪ, ಪವನ್, ಧನುಷ್ ಎಂಬುವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಯಾರಲ್ಲಿಯೂ ಹೇಳದಂತೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆಶಾ ಕಾರ್ಯಕರ್ತೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications