ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸ್ಪರ್ಧೆಗೆ ರಮಾನಾಥ್ ರೈ ಕಣ್ಣು
ಮಂಗಳೂರು, ಜೂನ್ 30: ವಿಧಾನ ಸಭಾ ಚುನಾವಣೆಯಲ್ಲಿ ಸೋತ ಬಳಕ ಮಾಜಿ ಸಚಿವ ರಮಾನಾಥ್ ರೈ ಸ್ವಲ್ಪ ಸಮಯದ ಬಿಡುವಿನ ಬಳಿಕ ರಾಜಕೀಯವಾಗಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿನ ಕಾರಣ ಗಳ ಬಗ್ಗೆ ವಿಮರ್ಶೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಳೆದ ಲೋಕ ಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಬಿ.ಜನಾರ್ದನ ಪೂಜಾರಿ ಭಾರೀ ಮತಗಳ ಅಂತರದಿಂದ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಎದುರು ಪರಾಭವಗೊಂಡಿದ್ದರು.
ಈ ಕ್ಷೇತ್ರವನ್ನು ಕೈವಶ ಪಡಿಸಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಆದರೆ 1991ರಿಂದ ಅದು ಸಾಧ್ಯವಾಗಿಲ್ಲ. 1977 ರಿಂದ 1989ರ ವರೆಗೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಜನಾರ್ದನ ಪೂಜಾರಿ ಸತತವಾಗಿ ಜಯ ಗಳಿಸಿ ಕಾಂಗ್ರೆಸ್ ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರ ಬುನಾದಿ ಹಾಕಿದ್ದರು.

1991ರ ಬಳಿಕ ಕಾಂಗ್ರೆಸ್ ಸತತ ಸೋಲು
1991ರ ಬಳಿಕ ಹಿಂದುತ್ವದ ಅಲೆ ಜಿಲ್ಲೆಯಲ್ಲಿ ಬೀಸಿದ ಪರಿಣಾಮ ಚಿತ್ರಣವೇ ಬದಲಾಯಿತು. 1991 ರ ಬಳಿಕ ಈ ಕ್ಷೇತ್ರ ಬಿಜೆಪಿ ವಶವಾಯಿತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಸೋಲುತ್ತಿದೆ. ಈ ಕ್ಷೇತ್ರದಿಂದ ಮತ್ತೆ ಜನಾರ್ದನ ಪೂಜಾರಿ ಸ್ಪರ್ಧಿಸುವುದು ಅನುಮಾನ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಹಲವು ಮುಖಂಡರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಮಿಥುನ್ ರೈ ಹಾಗೂ ರಮಾನಾಥ್ ರೈ ರೇಸಿನಲ್ಲಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ವಂಚಿತ ಯುವ ಮುಖಂಡ ಮಿಥುನ್ ರೈ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ರಮಾನಾಥ್ ರೈ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ಟಿಕೆಟ್ ನೀಡಿದರೆ ಸ್ಪರ್ಧೆ
ಇತ್ತೀಚೆಗೆ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷ ಈಗಾಗಲೇ ಪಾರ್ಲಿಮೆಟ್ ಚುನಾವಣೆಗೆ ಸಿದ್ಧವಾಗುತ್ತಿದ್ದು ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಟಿಕೆಟ್ ಗಾಗಿ ತೆರೆಮರೆಯಲ್ಲಿ ಯತ್ನಿಸುತ್ತಿದ್ದಾರೆ.

ಐವಾನ್ ಡಿಸೋಜಾ ಶತಾಯ ಗತಾಯ ಪ್ರಯತ್ನ
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಐವನ್ ಅವರಿಗೆ ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಐವನ್ ಕೂಡ ಶತಾಯ ಗತಾಯ ಯತ್ನಿಸುತ್ತಿದ್ದಾರೆ. ಅಂತಿಮವಾಗಿ ಟಿಕೆಟ್ ಯಾರ ಪಾಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications