ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಸುಳಿವು ನೀಡಿದರೆ ಬಹುಮಾನ, ಎನ್‌ಐಎ
ಮಂಗಳೂರು, ನವೆಂಬರ್, 02: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಎನ್‌ಐಎ ಬಲೆ ಬೀಸಿದೆ. ಮಹಮ್ಮದ್ ಮುಸ್ತಫಾ, ತುಫೈಲ್, ಉಮ್ಮರ್ ಫಾರೂಕ್, ಅಬೂಬಕರ್ ಸಿದ್ದೀಕ್ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ. ಆರೋಪಿಗಳ ಪತ್ತೆಗೆ ಎನ್‌ಐಎ ಲುಕ್ ಔಟ್ ನೋಟಿಸ್ ಹೊರಡಿಸಿದೆ. ಅಲ್ಲದೇ ನಾಲ್ವರು ಆರೋಪಿಗಳ ಬಗ್ಗೆ ಸುಳಿವು ನೀಡಿದರೆ ಎನ್‌ಐಎ ನಗದು ಬಹುಮಾನ ಕೊಡುವುದಾಗಿ ಘೋಷಿಸಿದೆ.

ಬೆಳ್ಳಾರೆ ನಿವಾಸಿ ಮೂಡುಮನೆ ಮಹಮ್ಮದ್ ಮುಸ್ತಫಾ ಸುಳಿವು ನೀಡಿದರೆ ಐದು ಲಕ್ಷ ರೂಪಾಯಿ ಬಹುಮಾನ, ಮಡಿಕೇರಿ ಗದ್ದಿಗೆ ಮಸೀದಿ ಪಕ್ಕದ ನಿವಾಸಿ ತುಫೈಲ್‌ನ ಸುಳಿವು ನೀಡಿದರೆ ಐದು ಲಕ್ಷ ರೂಪಾಯಿ ಬಹುಮಾನ, ಸುಳ್ಯದ ಕಲ್ಲುಮುಟ್ಟು ನಿವಾಸಿ ಉಮ್ಮರ್ ಫಾರೂಕ್‌ನ ಸುಳಿವು ನೀಡಿದರೆ ಎರಡು ಲಕ್ಷ ರೂಪಾಯಿ ಬಹುಮಾನ ಮತ್ತು ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದೀಕ್‌ನ ಸುಳಿವು ನೀಡಿದರೆ ಎರಡು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿದೆ. ಈ ಆರೋಪಿಗಳು ನಿಷೇಧಿತ ಪಿಎಫ್ಐ ಸಂಘಟನೆಯ ಸಕ್ರೀಯ ಸದಸ್ಯರಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು.

ಹತ್ತ ಜನ ಆರೋಪಿಗಳು ಪೊಲೀಸರ ಬಲೆಗೆ
ಜುಲೈ 27ರಂದು ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ಪಿಎಫ್‌ಐ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎನ್ನುವ ಸತ್ಯ ಹೊರಬಿದ್ದಿತ್ತು. ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮತ್ತು ಎನ್‌ಐಎ ಅಧಿಕಾರಿಗಳ ತಂಡ ಒಟ್ಟು ಹತ್ತು ಜನ ಆರೋಪಿಗಳನ್ನು ಬಂಧನ ಮಾಡಿತ್ತು. ಜುಲೈ 26ರಂದು ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದು, ಈ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಕೇಂದ್ರದ ಎನ್‌ಐಎಗೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ರಾಜ್ಯ ಪೊಲೀಸರು ಪ್ರವೀಣ್ ಹತ್ಯೆ ಆರೋಪಿಗಳಾದ ಸವಣೂರು ನಿವಾಸಿ ಜಾಕಿರ್ (29), ಬೆಳ್ಳಾರೆ ನಿವಾಸಿ ಶಫೀಕ್(27), ಬೆಳ್ಳಾರೆ ಪಳ್ಳಿಮಜಲು ನಿವಾಸಿ ಸದ್ದಾಂ(32), ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್(42), ಸುಳ್ಯದ ನಾವೂರು ನಿವಾಸಿ ಹಬೀದ್(22), ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್(28), ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್(33), ಸುಳ್ಯ ನಿವಾಸಿ ಶಿಹಾಬುದ್ದೀನ್(33), ಪುತ್ತೂರಿನ ಅಂಕತ್ತಡ್ಕ ನಿವಾಸಿ ರಿಯಾಝ್(27), ಸುಳ್ಯದ ಎಲಿಮಲೆ ನಿವಾಸಿ ಬಶೀರ್(28) ಎನ್ನುವ ಆರೋಪಿಗಳನ್ನು ಬಲೆಗೆ ಕೆಡವಿದ್ದರು.












Click it and Unblock the Notifications