ಚಂದ್ರಯಾನ-3 ಪ್ರತಿಕೃತಿಗೆ ತಿರುಪತಿಯಲ್ಲಿ ಪೂಜೆ ಮಾಡಿಸಿದ್ದು ಅವೈಜ್ಞಾನಿಕ ಎಂದ ವಿಚಾರವಾದಿ ನರೇಂದ್ರ ನಾಯಕ್
ಮಂಗಳೂರು, ಜುಲೈ, 17: ಉಡಾವಣೆಗೂ ಮುನ್ನ 'ಚಂದ್ರಯಾನ-3' ಪ್ರತಿಕೃತಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ಮಾಡಿರುವ ವಿಚಾರದಲ್ಲಿ ವಿಚಾರವಾದಿ ಚಿಂತಕ ನರೇಂದ್ರ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈಯುಕ್ತಿಕ ವಿಚಾರದಲ್ಲಿ ಪೂಜೆ ಪುರಸ್ಕಾರ ಮಾಡಿದರೆ ತಮ್ಮದೇನು ಆಕ್ಷೇಪವಿಲ್ಲ. ಆದರೆ ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಾವುದೋ ಒಂದು ಧಾರ್ಮಿಕ ಆಚರಣೆಯನ್ನು ಥಳುಕು ಹಾಕಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಕೆಲವು ರಾಷ್ಟ್ರಗಳ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಅವರೇನು ಪೂಜೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ವಿಜಯ್ ಮಲ್ಯನ ಪ್ರತಿಯೊಂದು ಏರ್ ಕ್ರಾಫ್ಟ್ ತಿರುಪತಿಗೆ ರೌಂಡ್ ಹಾಕಿ ಬರುತ್ತಿತ್ತು. ಆದರೆ ಆತ ಉದ್ಯಮದಲ್ಲಿ ನೆಲಕಚ್ಚಿಲ್ಲವೇ. ಹಿಂದೆ ಇದೇ ರೆಪ್ಲಿಕಾ - 1ನ ಪೂಜೆಗೆ ತಿರುಪತಿಗೆ ಹೋದ ಇಸ್ರೋದ ಇಬ್ಬರು ಮೂವರು ದಾರಿಯಲ್ಲಿಯೇ ಅಪಘಾತಕ್ಕೆ ಬಲಿಯಾಗಿದ್ದರು. ಇಂತಹ ಅನೇಕ ಮೂಲಭೂತ ಪ್ರಶ್ನೆಗಳು ನಮ್ಮ ಮುಂದಿದೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

ಸಂವಿಧಾನದ ಆರ್ಟಿಕಲ್ 51ಎ ಪ್ರಕಾರ ಪ್ರತಿಯೊಬ್ಬ ನಾಗರಿಕನು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಪ್ರವೃತ್ತಿ ಬೆಳೆಸುವುದು ಹಾಗೂ ಮಾನವತಾ ವಾದವನ್ನು ಬೆಳೆಸಬೇಕೆಂದು ಇದೆ. ಇದಕ್ಕೆ ವಿರುದ್ಧವಾಗಿ ಹೋದಲ್ಲಿ ಖಂಡಿತಾ ನಾವು ಪ್ರಶ್ನಿಸಬೇಕಾಗುತ್ತದೆ. ಪೂಜೆ ವೈಯುಕ್ತಿಕ ವಿಚಾರಕ್ಕಾದರೆ ನಮ್ಮದೇನು ತಕರಾರಿಲ್ಲ. ಯಾವಾಗ ಅದು ಸರ್ಕಾರಿ ಕಾರ್ಯಕ್ರಮದ ಯಶಸ್ಸಿಗೆ ಪೂಜೆ ಎನ್ನುವಾಗ ಅದು ಪ್ರಶ್ನಾರ್ಹವಾಗುತ್ತದೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.
ವೈಯಕ್ತಿಕವಾಗಿ ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಎಲ್ಲವೂ ಮಾಡಲಿ. ಆದರೆ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪೂಜೆ ಅಗತ್ಯವಿಲ್ಲ. ಕೇವಲ ಒಂದು ವರ್ಗದ ಹಣ ಇದಕ್ಕಾಗಿ ಬಳಕೆಯಾಗಿಲ್ಲ. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳು ರಾಕೆಟ್ ಲಾಂಚ್ ಮಾಡುವಾಗ ಯಾವ ದೇವರ ಆಶೀರ್ವಾದ ಅವರ ಮೇಲಿತ್ತು. ಅವರ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗೋಕೆ ಪೂಜೆ ಮಾಡಿದ್ರಾ? ಎಂದು ನರೇಂದ್ರ ನಾಯಕ್ ಪ್ರಶ್ನಿಸಿದ್ದಾರೆ.












Click it and Unblock the Notifications