ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಬಗ್ಗೆ ಅವಹೇಳನಕಾರಿ ಪೋಸ್ಟ್
ಉಡುಪಿ, ನವೆಂಬರ್ 17 : ಕುಂದಾಪುರ ಕ್ಷೇತ್ರ ಬಿಜೆಪಿಯ ಎರಡು ಬಣಗಳ ಕಿತ್ತಾಟ ಮತ್ತೆ ಮುಂದುವರೆದಿದೆ. ಸಾಮಾಜಿಕ ಜಾಲತಾಣ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಕುರಿತು ಅವಹೇಳನಕಾರಿ ಚಿತ್ರಗಳನ್ನು ಹರಿಬಿಡಲಾಗಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ಅವಹೇಳನಕಾರಿ ಚಿತ್ರಗಳನ್ನು ಮೂಲ ಬಿಜೆಪಿ ಬಣದಲ್ಲಿ ಗುರುತಿಸಿಕೊಂಡವವರು ಸಾಮಾಜಿಕ ಜಾಕತಾಣಗಳಲ್ಲಿ ಹರಿಬಿಟ್ಟು ಅವಮಾನ ಮಾಡಿರುವುದಾಗಿ ಉಡುಪಿಯ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕಿಶೋರ್ ಕುಮಾರ್ , ಮುಖಂಡ ರಾಜು ಪೂಜಾರಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲರೂ ಮೂಲ ಬಿಜೆಪಿಗರಾಗಿದ್ದು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ.
ಇದೇ ನವೆಂಬರ್ 13 ರಂದು ಕುಂದಾಪುರದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂಭಾಗದಲ್ಲಿಯೇ ಹಾಲಾಡಿ ಬಣ ಹಾಗೂ ಮೂಲ ಬಿಜೆಪಿ ಬಣ ಕಿತ್ತಾಡಿಕೊಂಡಿತ್ತು. ಈ ವೇಳೆ ಸಮಾವೇಶದ ವೇದಿಕೆಯಲ್ಲಿಯೇ ಬಿಎಸ್ ವೈ ಮೂಲ ಬಿಜೆಪಿಗರ ವಿರುದ್ಧ ಕಿಡಿಕಾರಿದ್ದರು.
ಇದರಿಂದ ಅಸಮಾಧಾನಗೊಂಡ ಬಿಜೆಪಿ ಮೂಲ ಬಣದವರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ. ಕುಂದಾಪುರ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಸೈಬರ್ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.












Click it and Unblock the Notifications