ಹೊಸ ವರ್ಷಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ 13 ಖಡಕ್ ಸೂಚನೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಮಂಗಳೂರು, ಡಿಸೆಂಬರ್ 29: ಹೊಸ ವರ್ಷ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ನೋಂದಾಯಿತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಡಿ.31ರಂದು ರಾತ್ರಿ 12.30ರವರೆಗೆ ಮಾತ್ರ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರವಿಕುಮಾರ್ ಎಂ.ಆರ್, ಧ್ವನಿವರ್ಧಕ, ವಿದ್ಯುನ್ಮಾನ ಉಪಕರಣಗಳನ್ನು ಮತ್ತು ಶಬ್ದ ಉಂಟು ಮಾಡುವ ಉಪಕರಣಗಳನ್ನು ರಾತ್ರಿ 10ರ ಬಳಿಕ ಬಳಸುವಂತಿಲ್ಲ. ಕಾರ್ಯಕ್ರಮ ಆಯೋಜನೆಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯತಕ್ಕದ್ದು. ಸಭಾಂಗಣ, ತೆರೆದ ಸ್ಥಳ, ಕಲ್ಯಾಣ ಮಂಟಪ, ಸಭಾ ಭವನ, ಅಪಾರ್ಟ್ ಮೆಂಟ್, ಕಡಲ ತೀರ, ಹೋಮ್ ಸ್ಟೇ, ಮಾಲ್ ಪ್ರದೇಶಗಳಲ್ಲಿ ಡಿಜೆ ಡಾಲಿ ಡಾನ್ಸ್‌ಗಳನ್ನು ನಡೆಸುವಂತಿಲ್ಲ ಎಂದಿದ್ದಾರೆ.
ಕಾರ್ಯಕ್ರಮ ಆಯೋಜಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಅಬಕಾರಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಅನುಮತಿ ಪಡೆದಂತಹ ಹೋಂ ಸ್ಟೇ, ಪಬ್, ಕ್ಲಬ್ ಪರಿಸರದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಬಾರದು. ಸದ್ರಿ ಸ್ಥಳಗಳಲ್ಲಿ ಯಾವುದೇ ರೀತಿ ಕಾನೂನು ಬಾಹಿರ ಚಟುವಟಿಕೆ ನಡೆದಲ್ಲಿ ಮಾಲಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸಲಾಗುವುದು. ಪಬ್, ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಅಶ್ಲೀಲ ನೃತ್ಯ, ಗಾಂಜಾ, ಅಫೀಮು, ಮತ್ತಿತರರ ಮತ್ತೇರಿಸುವ ಅಮಲು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಕಾರ್ಯಕ್ರಮದ ವೇಳೆ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜಘಾತಕ ಶಕ್ತಿಗಳು ಕಂಡುಬಂದಲ್ಲಿ ತಕ್ಷಣ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಶಾಂತಿ ಭಂಗ ಉಂಟಾಗದ ಹಾಗೆ ಎಲ್ಲಾ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದ ಪ್ರತಿಯಲ್ಲಿನ ಅಂಶಗಳು..!
1. ಡಿಸೆಂಬರ್ 31'ಹಾಗೂ ಜನವರಿ-1-2023ರ ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೋಂದಾಯಿತ/ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ನಿಯಮಗಳಿಗೆ ಒಳಪಟ್ಟು ಕಾರ್ಯಕ್ರಮವನ್ನು ರಾತ್ರಿ 12.30 ಗಂಟೆಗೆಯವರೆಗೆ ನಡೆಸಲು ಅನುಮತಿ ನೀಡಲಾಗಿದೆ.
2.ಅನುಮತಿಸಲಾದ ನೋಂದಾಯಿತ/ ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಧ್ವನಿ ವರ್ಧಕ /ವಿದ್ಯುನ್ಮಾನ ಉಪಕರಣಗಳನ್ನು ಮತ್ತು ಶಬ್ದ ಉಂಟುಮಾಡುವಉಪಕರಣಗಳನ್ನು ರಾತ್ರಿ 10.00 ಗಂಟೆಯ ನಂತರ ಬಳಸುವಂತಿಲ್ಲ.
3.ಅನುಮತಿಸಲಾದ ನೋಂದಾಯಿತ/ ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ನಿಯಮಗಳಿಗೆ ಒಳಪಟ್ಟು ಕಾರ್ಯಕ್ರಮವನ್ನು ನಡೆಸಲು ಪೊಲೀಸ್ ಇಲಾಖೆಯವರಿಂದ ಅನುಮತಿಯನ್ನು ಪಡೆಯತಕ್ಕದ್ದು.
4.ಸಭಾಂಗಣ, ತೆರೆದ ಸ್ಥಳ,ಹೊರಾಂಗಣ ಪ್ರದೇಶಗಳಾದ (Open Places) ಕಲ್ಯಾಣಮಂಟಪ, ಸಭಾ ಭವನ, ಸರ್ವೀಸ್ ಅಪಾರ್ಟಮೆಂಟ್, ಕಡಲ ತೀರ, ಹೊಂಸ್ಟೇ, ಮಾಲ್ ಹಾಗೂ ಇತ್ಯಾದಿ ತೆರೆದ ಪ್ರದೇಶಗಳಲ್ಲಿ ಡಿಜೆ/ ಡಾಲ್ಟಿ ಡಾನ್ಸ್ ಗಳನ್ನು ನಡೆಸುವಂತಿಲ್ಲ ಮತ್ತು ಹೊಸ ವರ್ಷ ಆಚರಣೆಯ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ,ಇತ್ಯಾದಿಗಳನ್ನು ಆಯೋಜಿಸುವ ಮುನ್ನ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆ/ ಗ್ರಾಮೀಣ ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆಯತಕ್ಕದ್ದು.
5.ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲು ಯಾವುದೇ ನಿರ್ಬಂಧವಿರುವುದಿಲ್ಲ. ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವ ಮೇಲ್ವಿಚಾರಕರು/ ಆಯೋಜಕರು ಘನ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಮತ್ತು ಸರ್ಕಾರದ ನಿಯಮಗಳಿಗೆ ಒಳಪಟ್ಟು ಕ್ರಮವಹಿಸುವುದು.
6.ದಿನನಿತ್ಯ ನಡೆಯುವ ಕ್ಲಬ್/ರೆಸ್ಟೋರೆಂಟ್‌ಗಳ ದೈನಂದಿನ ವ್ಯವಹಾರ ನಡೆಸಲು ಹಾಗೂ ಪರ್ಮಿಟ್ ನಂತೆ ನಿಗದಿತ ಸಮಯದೊಳಗಾಗಿ ಕಾರ್ಯಕ್ರಮ ಮುಕ್ತಾಯಗೊಳಿಸಲು ಸೂಚಿಸಿದೆ. ನಿಯಮ ಮೀರಿ ಕಾರ್ಯಕ್ರಮವನ್ನು ನಡೆಸುವಂತಿಲ್ಲ .
7.ಅಧಿಕೃತ/ ನೋಂದಾಯಿತ ಹೋಟೆಲ್ ಮಾಲ್ /ಪಬ್/ರೆಸ್ಟೋರೆಂಟ್ ಗಳು ಹಾಗೂ ಎಲ್ಲಾ ಪ್ರದೇಶಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಕೋವಿಡ್ -19 ರ ನಿಯಮಗಳನ್ನು ಪಾಲಿಸಬೇಕು.
8.ಅಬಕಾರಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ಅನುಮತಿಯನ್ನು ಪಡೆದಂತಹ ಹೋಂ ಸ್ಟೇ / ಪಬ್/ ಕ್ಲಬ್/
ಪರಿಸರದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಬಾರದು. ಸದ್ರಿ ಸ್ಥಳಗಳಲ್ಲಿ ಯಾವುದೇ ರೀತಿ ಕಾನೂನು
ಬಾಹಿರ ಚಟುವಟಿಕೆ ನಡೆದಲ್ಲಿ ಮಾಲೀಕರನ್ನೇ ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸಲಾಗುವುದು.
9.ನೊಂದಾಯಿತ ಪಬ್,ಹೋಟೆಲ್, ರೆಸ್ಟೋರೆಂಟ್ ಮತ್ತು ಜಿಲ್ಲೆಯ ಇತರೆ ಯಾವುದೇ ಪ್ರದೇಶದಲ್ಲಿ ಅಶ್ಲೀಲ ನೃತ್ಯ/ಡ್ರಗ್ಸ್/ಗಾಂಜ/ ಅಫೀಮು,ಮತ್ತಿತರರ ಮತ್ತೇರಿಸುವ ಅಮಲು ಪದಾರ್ಥಗಳನ್ನು ಕಡ್ಡಾಯವಾಗಿ ನಿಷೇಶಿಸಲಾಗಿದೆ.
10.ಅಧಿಕೃತ/ ನೋಂದಾಯಿತ ಕೇಂದ್ರಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು, ಅಪರಿಚಿತರು, ಸಮಾಜಘಾತುಕ ಶಕ್ತಿಗಳು ಕಂಡುಬಂದಲ್ಲಿ ಕೂಡಲೇ ತಮ್ಮ ವ್ಯಾಪ್ತಿಯ ಪೋಲೀಸ್ ಠಾಣೆಗೆ, ಮಂಗಳೂರು ನಗರ ಪಾಲಿಕೆ,ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆಗೆ ಮಾಹಿತಿಯನ್ನು ನೀಡುವುದು.
11.ಶಾಂತಿ ಭಂಗ ಉಂಟಾಗದ ಹಾಗೆ ಎಲ್ಲಾ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳುವುದು.
12.ಪೊಲೀಸ್ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಪರಿಸರ ಮಾಲಿನ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನೊಳಗೊಂಡ 3 ತಂಡಗಳ ಗಸ್ತು ಪಡೆಯನ್ನು ರಚಿಸಲಾಗಿದೆ.ಯಾವುದೇ ರೀತಿಯ ಅಹಿತಕರ ಘಟನೆಗಳು ಮತ್ತು ಅವಧಿ ಮೀರಿ ಕಾರ್ಯಕ್ರಮಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮೇಲ್ಕಂಡ ತಂಡಗಳು ಸಕ್ರೀಯವಾಗಿರತಕ್ಕದ್ದು.
13.ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಎಲ್ಲಾ ಸರ್ವಿಸ್ ಅಪಾರ್ಟ್ ಮೆಂಟ್, ಹೋಟೆಲ್, ಪಬ್,ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರ ಸಭೆಯನ್ನು ಕರೆದು ಹೊಸ ವರ್ಷ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.












Click it and Unblock the Notifications