ನಾನೇ ಡಾನ್ ಎಂದು ಕಿರುಕುಳ ನೀಡುತ್ತಿದ್ದವ ಹೆಣವಾದ
ಮಂಗಳೂರು, ಜೂ. 24 : ಬಂಟ್ವಾಳದಲ್ಲಿ ನಡೆದಿದ್ದ ರೌಡಿ ಶೀಟರ್ ನೌಶಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ವೈಯಕ್ತಿ ದ್ವೇಷವೇ ಕಾರಣ ಎಂದು ಆರೋಪಿಗಳು ಹೇಳಿದ್ದಾರೆ. ಒಬ್ಬ ಆರೋಪಿ ತಲೆಮರಿಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನೌಶಾದ್ ಕೊಲೆ ಆರೋಪಿಗಳನ್ನು ಹಿಡಿಯಲು ಎರಡು ತಂಡಗಳನ್ನು ರಚಿಸಿದ್ದ ಬಂಟ್ವಾಳ ಪೊಲೀಸರು, ಇರ್ಫಾನ್ ಅಲಿಯಾಸ್ ಇಪ್ಪು (24), ತೌಸೀಫ್ (22), ಮಹಮದ್ ನಿಸಾರ್ (26), ನಿಸಾರ್ (24), ಅಬ್ದುಲ್ ಸತ್ತಾರ್ (27), ಮಹಮದ್ ಸಿರಾಜ್ (25) ಅವರನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಸದ್ದಾಂ ತಲೆ ಮರೆಸಿಕೊಂಡಿದ್ದಾನೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ತಲವಾರು, ಒಂದು ರಾಡ್ ಮತ್ತು ಒಂದು ಇನೊವಾ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ. ಜೂ. 21ರಂದು ಸಂಜೆ ಮಾರಿಪಳ್ಳ ಸಮೀಪ ನೌಶಾದ್ ನನ್ನು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. [ಬಂಟ್ವಾಳದಲ್ಲಿ ರೌಡಿ ಶೀಟರ್ ಕೊಚ್ಚಿ ಕೊಲೆ]
ಕಿರುಕುಳ ನೀಡುತ್ತಿದ್ದ : "ಮಾರಿಪಳ್ಳದಲ್ಲಿ ನಾನೇ ಡಾನ್. ನನ್ನನ್ನು ನೌಶಾದ್ ಬಾಯಿ ಎಂದು ಕರೆಯಬೇಕು' ಎಂದು ನೌಶಾದ್ ನಮಗೆ ಕಿರುಕಿಳ ನೀಡುತ್ತಿದ್ದ. ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದ. ಯುವತಿಯನ್ನು ಚುಡಾಯಿಸುತ್ತಿದ್ದ ಆದ್ದರಿಂದ ಆತ ಬದುಕಿದಲ್ಲಿ ನಮ್ಮನ್ನು ಉಳಿಸುವುದಿಲ್ಲ ಎಂದು ನಾವು ಆತನ ಕೊಲೆ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆ.
ಬಾರ್ ನಲ್ಲಿ ಸಿಕ್ಕಿಬಿದ್ದರು : ನೌಶಾದ್ ಕೊಲೆ ಪ್ರಕರಣದ ತನಿಖೆ ನಡೆಸಲು ಬಂಟ್ವಾಳ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಜೂ. 23ರಂದು ಆರೋಪಿಗಳು ಸಜಿಪಮುನ್ನೂರು ಗ್ರಾಮದ ಸುರಭಿ ಬಾರ್ ನಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎರಡೂ ತಂಡಗಳು ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಎಲ್ಲಾ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಲಯದ ಐಜಿಪಿ ಅಮೃತ್ ಪೌಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಡಿವೈಎಸ್‌ಪಿ ರಶ್ಮಿ ಪರೆಡ್ಡಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಯು. ಬೆಳ್ಳಿಯಪ್ಪ, ಪಿಎಸ್‌ಐ ನಾಗರಾಜ್, ಡಿಸಿಐಬಿ ಘಟಕದ ಎಎಸ್‌ಐ ಸಂಜೀವ ಪುರುಷ, ಸಿಬ್ಬಂದಿ ಉದಯ ರೈ, ತಾರಾನಾಥ, ಇಕ್ಬಾಲ್, ಬಂಟ್ವಾಳ ಗ್ರಾಮಾಂತರ ಠಾಣೆಯ ಮುಖ್ಯಪೇದೆ ಕುಟ್ಟಿ ಎಂ.ಕೆ. ಮುಂತಾದವರು ಭಾಗವಹಿಸಿದ್ದರು.












Click it and Unblock the Notifications