ಮಂಗಳೂರು-ವಿಜಯಪುರ ರೈಲು; ಸಂಸದರ, ಪ್ರಯಾಣಿಕರ ಬೇಡಿಕೆ ಏನು?
ಮಂಗಳೂರು, ಸೆಪ್ಟೆಂಬರ್ 19; ಭಾರತೀಯ ರೈಲ್ವೆ ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸಲು ಮಂಗಳೂರು-ವಿಜಯಪುರ ನಡುವೆ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸುತ್ತದೆ. ಪ್ರಯಾಣಿಕರಿಂದ ಈ ರೈಲು ಸೇವೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸೀಟುಗಳು ಭರ್ತಿ ಆಗುತ್ತವೆ. ಆದರೆ ಬೇಡಿಕೆಯೇ ಬೇರೆ ಇದೆ.
ಮಂಗಳೂರು-ವಿಜಯಪುರ ನಡುವಿನ ವಿಶೇಷ ರೈಲಿನ ಪ್ರಯಾಣಿಕರ ಬೇಡಿಕೆಗೆ ಈಗ ಸಂಸದರು ಧ್ವನಿ ಗೂಡಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಈ ಕುರಿತು ರೈಲ್ವೆ ಇಲಾಖೆ ಗಮನ ಸೆಳೆದಿದ್ದಾರೆ.

ರೈಲ್ವೆ ಇಲಾಖೆ ಮಂಗಳೂರು-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಿ ಸುಮಾರು ಎರಡು ವರ್ಷ ಕಳೆದಿವೆ. ಆದರೆ ಇನ್ನೂ ಸಹ ರೈಲು ತತ್ಕಾಲ್ ಮಾದರಿಯಲ್ಲಿಯೇ ಸಂಚಾರ ನಡೆಸುತ್ತಿದೆ. ಈ ರೈಲನ್ನು ಕಾಯಂಗೊಳಿಸಬೇಕು ಎಂಬ ಕೂಗು ಈಗ ಜೋರಾಗಿದೆ.
ರೈಲ್ವೆ ಇಲಾಖೆ ಮೇಲೆ ಒತ್ತಡ; ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ವಿಜಯಪುರ ಮತ್ತು ದಕ್ಷಿಣ ಕನ್ನಡ ರೈಲು ಪ್ರಯಾಣಿಕರ ವೇದಿಕೆ ಮತ್ತು ದಕ್ಷಿಣ ಕನ್ನಡ ಮತ್ತು ವಿಜಯಪುರದ ಸಂಸದರು ರೈಲ್ವೆ ಇಲಾಖೆಗೆ ಮೇಲೆ ಮಂಗಳೂರು-ವಿಜಯಪುರ ರೈಲನ್ನು ಕಾಯಂಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ರೈಲನ್ನು ಕಾಯಂಗೊಳಿಸುವುದು ಮಾತ್ರವಲ್ಲ. ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ರೈಲು ಸೇವೆ ವಿಸ್ತರಣೆ ಮಾಡಬೇಕು ಎಂದು ಸಹ ಬೇಡಿಕೆ ಇಡಲಾಗಿದೆ. ಸಂಸದ ರಮೇಶ್ ಜಿಗಜಿಣಗಿ ಸೆಪ್ಟೆಂಬರ್ 11ರಂದು ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಸಹ ಬರೆದಿದ್ದಾರೆ.
ಮಂಗಳೂರು-ವಿಜಯಪುರ ವಿಶೇಷ ರೈಲು ಸಂಚಾರ ಆರಂಭವಾಗಿ 2 ವರ್ಷಗಳು ಕಳೆದಿವೆ. ನೈಋತ್ಯ ರೈಲ್ವೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಂತೆ ಈ ರೈಲನ್ನು ಕಾಯಂಗೊಳಿಸಬೇಕು ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇರುವ ರೈಲು ನಂಬರ್ 07377/ 07378 ರೈಲನ್ನು ಕಾಯಂಗೊಳಿಸಬೇಕು ಎಂದು ನೈಋತ್ಯ ರೈಲ್ವೆ ಈಗಾಗಲೇ ತನ್ನ ಪ್ರಸ್ತಾವನೆಯಲ್ಲಿ ಹೇಳಿದೆ.
ವಿಜಯಪುರದಿಂದ ಸಂಜೆ 6.35ಕ್ಕೆ ಹೊರಡುವ ರೈಲು ಹುಬ್ಬಳ್ಳಿಗೆ 11.55ಕ್ಕೆ ತಲುಪಲಿದೆ. ಮರುದಿನ 12.40ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸುತ್ತದೆ. ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಡುವ ರೈಲು ಮರುದಿನ ಮುಂಜಾನೆ 3.35ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಬಳಿಕ 9.35ಕ್ಕೆ ವಿಜಯಪುರ ತಲುಪುತ್ತದೆ.
ಈ ರೈಲು ವೇಳಾಪಟ್ಟಿ ಬದಲಾವಣೆಗೆ ಸಹ ಬೇಡಿಕೆ ಇದೆ. ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು, 9.30ಕ್ಕೆ ಹುಬ್ಬಳ್ಳಿ, ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ತಲುಪಬೇಕು. ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು, ಮುಂಜಾನೆ 5ಕ್ಕೆ ಹುಬ್ಬಳ್ಳಿ, 10.30ಕ್ಕೆ ವಿಜಯಪುರ ತಲುಪುವಂತೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಡಿಸೆಂಬರ್ 1, 2021ರಂದು ವಿಜಯಪುರದಿಂದ ಮತ್ತು ಡಿಸೆಂಬರ್ 2ರಿಂದ ಮಂಗಳೂರಿನಿಂದ ಈ ರೈಲು ಸೇವೆ ಆರಂಭವಾಯಿತು. ಬಳಿಕ ಕೋವಿಡ್ ಕಾಲದಲ್ಲಿ ರೈಲು ಸೇವೆ ಸ್ಥಗಿತವಾಯಿತು. ಬಳಿಕ ಮತ್ತೆ ಪ್ರಯಾಣಿಕರ ಬೇಡಿಕೆಯಂತೆ ರೈಲು ಸೇವೆ ಆರಂಭಿಸಲಾಯಿತು. ಆದರೆ ಇಂದಿಗೂ ಸಹ ರೈಲು ಕಾಯಂಗೊಳಿದೇ ತತ್ಕಾಲ್ ಮಾದರಿಯಲ್ಲಿ ಓಡಿಸಲಾಗುತ್ತಿದೆ.
ಆಗಸ್ಟ್‌ನಲ್ಲಿ ಭಾರತೀಯ ರೈಲ್ವೆಯು ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೊದಲು ಪ್ರತಿದಿನ ಆಗಸ್ಟ್ 31ರ ತನಕ ಓಡಿಸಲು ಸೂಚಿಸಲಾಗಿತ್ತು. ಈಗ ಸೆಪ್ಟೆಂಬರ್ 1 ರಿಂದ 30ರ ತನಕ ವಿಸ್ತರಣೆ ಮಾಡಿ ಆದೇಶಿಸಿದೆ.
ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಪ್ರತಿದಿನ ಸೆಪ್ಟೆಂಬರ್ 1ರ ತನಕ ಓಡಿಸಲು ಈ ಹಿಂದೆ ಸೂಚಿಸಲಾಗಿತ್ತು. ಈಗ ಅದನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 1ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.
ಈ ಹಿಂದೆ ಪ್ರಯಾಣಿಕರೊಬ್ಬರು ಈ ರೈಲನ್ನು ಕಾಯಂಗೊಳಿಸುವ ಬಗ್ಗೆ ಮಾಹಿತಿ ಹಕ್ಕು ಮೂಲಕ ಪ್ರಶ್ನೆ ಮಾಡಿದ್ದರು. ಆಗ ಇಲಾಖೆ ರೈಲ್ವೆ ಇಲಾಖೆ ರೈಲು ಕಾಯಂಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಉತ್ತರ ನೀಡಿತ್ತು. ತತ್ಕಾಲ್ ಸೇವೆಯಾದರೆ ರೈಲಿನ ದರಗಳು ಹೆಚ್ಚು, ಕಾಯಂಗೊಳಿಸಿ ದರವನ್ನು ಕಡಿಮೆ ಮಾಡಬೇಕು ಎಂಬುದು ಪ್ರಯಾಣಿಕರ ಬೇಡಿಕೆಯಾಗಿದೆ. ಆದ್ದರಿಂದ ರೈಲು ಕಾಯಂಗೊಳಿಸಿ ಎಂದು ಬೇಡಿಕೆ ಇಡಲಾಗುತ್ತಿದೆ.












Click it and Unblock the Notifications