ರೈತರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲು ಮೋದಿ ಸರ್ಕಾರದಿಂದ ಸಹಕಾರಿ ಸಚಿವಾಲಯ: ಅಮಿತ್ ಶಾ
ದಕ್ಷಿಣ ಕನ್ನಡ ಪ್ರದೇಶವು ಪಶ್ಚಿಮ ಘಟ್ಟಗಳು ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ 'ಪವಿತ್ರ ಭೂಮಿ' ಎಂದ ಅಮಿತ್ ಶಾ
ದಕ್ಷಿಣ ಕನ್ನಡ, ಫೆಬ್ರವರಿ. 12: ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ರೈತರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲು ರಾಷ್ಟ್ರ ಮಟ್ಟದಲ್ಲಿ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈ ಕ್ಷೇತ್ರದಲ್ಲಿ ರಾಜ್ಯ ಸಹಕಾರಿ ಕ್ಯಾಂಪ್ಕೊದ ಸಾಧನೆ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದಾರೆ.
1973 ರಲ್ಲಿ ಸುಮಾರು 3,500 ಸದಸ್ಯರೊಂದಿಗೆ ಪ್ರಾರಂಭವಾದ ಕ್ಯಾಂಪ್ಕೊ ಈಗ 1.38 ಲಕ್ಷ ರೈತ ಸದಸ್ಯರನ್ನು ಹೊಂದಿದೆ ಮತ್ತು ವಾರ್ಷಿಕ ಸುಮಾರು 3,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು. ಕಳೆದ 50 ವರ್ಷಗಳಲ್ಲಿ ಅವರ ಸಮರ್ಪಣಾ ಮನೋಭಾವದ ಕೆಲಸಕ್ಕೆ ಇದು ಪ್ರಮಾಣಪತ್ರವಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು ದಕ್ಷಿಣ ಕನ್ನಡ ಪ್ರದೇಶವು ಪಶ್ಚಿಮ ಘಟ್ಟಗಳು ಮತ್ತು ಅರಬ್ಬಿ ಸಮುದ್ರದ ನಡುವೆ ಇರುವ 'ಪವಿತ್ರ ಭೂಮಿ' ಎಂದು ಶ್ಲಾಘಿಸಿರುವ ಅಮಿತ್ ಶಾ, ಗುಜರಾತಿಗಳು ಸುಪಾರಿ ಸೇವಿಸಿದಾಗ ಯಾವಾಗಲೂ ಮಂಗಳೂರಿನ ಬಗ್ಗೆ ಯೋಚಿಸುತ್ತಾರೆ. ನಾವು ಗಟ್ಟಿಯಾದ ಸಾಂಪ್ರದಾಯಿಕ ಸಂಪರ್ಕವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿ ಯಾವಾಗಲೂ ದೀನ್ ದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಅನುಸರಿಸುತ್ತದೆ ಮತ್ತು ಜನರ ಪ್ರಗತಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸುತ್ತದೆ. ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಮಾನವೀಯ ಧೋರಣೆಯನ್ನು ಅಳವಡಿಸಿಕೊಂಡಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.
ಇನ್ನು, ಕಾಂತಾರಾ ಸಿನಿಮ ಆಬಗ್ಗೆ ಪ್ರಸ್ತಾಪಿಸಿರುವ ಅವರು, ಪುತ್ತೂರು, ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಕಾಂತಾರ ನೋಡಿದ ಮೇಲೆ ಕರಾವಳಿ ಸಂಸ್ಕೃತಿಯನ್ನು ತಿಳಿದುಕೊಂಡೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಚಿವರಾದ ಆರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ವಿ ಸುನೀಲ್ ಕುಮಾರ್ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರು ಮತ್ತು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.












Click it and Unblock the Notifications