ಮಂಗಳೂರಿನಲ್ಲಿ ಮೋದಿ ಬ್ಯಾನರಿಗೆ ಕಿಡಿಗೇಡಿಗಳ ಬೆಂಕಿ
ಮಂಗಳೂರು, ಸೆ.20 : ಗುರುಪುರ ಪ್ರದೇಶದ ಬಸ್ ತಂಗುದಾಣದ ಬಳಿ "ಒಂದು ಭಾರತ ಶ್ರೇಷ್ಠ ಭಾರತ", "ಮೋದಿ ಲಾವೋ ದೇಶ್ ಬಚಾವೋ" ಎಂದು ಬರೆದಿರುವ ಬ್ಯಾನರ್‌ಗೆ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿ ಗಲಭೆ ಎಬ್ಬಿಸಲು ಹುನ್ನಾರ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆ ವಿವರ : ಭಾವಿ ಪ್ರಧಾನಿ ಎಂದೇ ಬಿಂಬಿತರಾಗುತ್ತಿರುವ ನರೇಂದ್ರ ಮೋದಿಯವರ ಭಾವಚಿತ್ರ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರವಿರುವ ಬ್ಯಾನರ್‌ಗಳನ್ನು ನಮೋ ಬ್ರಿಗೇಡ್ ಮಂಗಳೂರು ಶಾಖೆ ಗುರುಪುರ ಶಾಖೆ ಬಸ್ ತಂಗುದಾಣದ ಬಳಿ ನಿಲ್ಲಿಸಿತ್ತು. ಗುರುವಾರ ರಾತ್ರಿ ದುಷ್ಕರ್ಮಿಗಳ ತಂಡ ನಿಲ್ಲಿಸಲಾದ ಬ್ಯಾನರ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಎರಡು ದಿನಗಳ ಹಿಂದೆ ಮುಡಿಪು ಪ್ರದೇಶದಲ್ಲೂ ಇದೇ ರೀತಿಯ ನಡೆದಿದ್ದು, ಕೊಣಾಜೆ ಪೊಲೀಸರು 4 ದುಷ್ಕರ್ಮಿಗಳನ್ನು ಬಂಧಿಸಿದ್ಧರು. ಈ 4 ಮಂದಿ ದುಷ್ಕರ್ಮಿಗಳು ಮುಡಿಪು ಭಾಗದಲ್ಲಿ ಒಂದಲ್ಲ ಒಂದು ಅಪರಾಧಗಳಲ್ಲಿ ಗುರುತಿಸಿಕೊಳುತ್ತಿರುವ ನವಾಜ್ ಮಾತು ತಂಡ ಎಂದು ತಿಳಿದುಬಂದಿದೆ ಎಂದು ಕೊಣಾಜೆ ಪೊಲೀಸರು ತಿಳಿಸಿದ್ದಾರೆ.

ಮೋದಿ ಟೀ ಶರ್ಟ್ ಧರಿಸಿದ್ದ ವ್ಯಕ್ತಿಗೂ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ರಸ್ತೆ ತಡೆ ನಡೆಸಿ ಮೋದಿ ಚಿತ್ರವಿದ್ದ ಬ್ಯಾನರಿಗೆ ಬೆಂಕಿ ಹಚ್ಚಲು ಕಿಡಿಗೇಡಿಗಳು ಯತ್ನಿಸಿದಾಗ ಅವರನ್ನು ತಡೆಯಲು ಯತ್ನಿಸಿದ ಬಸ್ ಡ್ರೈವರ್ ಮತ್ತು ಕಂಡಕ್ಟರನ್ನು ಬಸ್ಸಿನಿಂದ ಹೊರಗೆಳೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ನವಾಜ್, ಇಕ್ಬಾಲ್, ಜಹೇದ್ ಮತ್ತು ಜಾಫರ್ ವಿರುದ್ಧ ಗುರುಪುರ ನಮೋ ಬ್ರಿಗೇಡ್ ಶಾಖೆಯ ಕಾರ್ಯಕರ್ತ ಜಗದೀಶ್ ಆಳ್ವಾರ ಅವರು ಬಜ್ಪೆ ಪೋಲಿಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಕೃತ್ಯ ನಡೆಸಿದ ಸಂದರ್ಭದಲ್ಲಿ ಅವರು ಮದ್ಯ ಸೇವಿಸಿದ್ದರೆಂದು ಕೂಡ ಹೇಳಲಾಗಿದೆ.
ಈ ಘಟನೆಯಿಂದ ವಿಚಲಿತರಾಗದ ನಮೋ ಬ್ರಿಗೇಡ್ ತಂಡ ನಗರದಾದ್ಯಂತ ಮತ್ತಷ್ಟು ಮೋದಿ ಬ್ಯಾನರುಗಳನ್ನು ಕಟ್ಟಲು ನಿರ್ಧರಿಸಿದೆ. ಅಲ್ಲದೆ, ಕಿಡಿಗೇಡಿಗಳ ವಿರುದ್ಧ ತಿರುಗಿಬೀಳದಿರಲು ಬ್ರಿಗೇಡ್ ನಿರ್ಧರಿಸಿದೆ. ಇದಕ್ಕೂ ಮೊದಲು ಸಾವಿರಾರು ನಮೋ ಬ್ರಿಗೇಡ್ ಕಾರ್ಯಕರ್ತರು ಭಾರೀ ಪ್ರತಿಭಟನೆಗೆ ನಿರ್ಧರಿಸಿದ್ದರು. ಆದರೆ, ಬೃಹತ್ ಪ್ರತಿಭಟನೆ ನಡೆಸಿದರೆ ಕಿಡಿಗೇಡಿಗಳನ್ನು ಮತ್ತಷ್ಟು ಕೆಣಕಿದಂತಾಗುತ್ತದೆ ಎಂದು ಪ್ರತಿಭಟನೆಯನ್ನು ಕೈಬಿಡಲಾಯಿತು.












Click it and Unblock the Notifications