ಮಂಗಳೂರು : ಬಾಲಕಿ ಆತ್ಮಹತ್ಯೆ, ಪೊಲೀಸ್ ಕಿರುಕುಳ ಆರೋಪ
ಮಂಗಳೂರು, ಜೂ.10 : ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಕೃಷ್ಣನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಆಕೆ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಪೊಲೀಸ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದು ತನಿಖೆ ನಡೆಯುತ್ತಿದೆ.
ಮೃತ ಬಾಲಕಿಯನ್ನು ಕೃಷ್ಣನಗರ ನಿವಾಸಿ ನಿವೃತ್ತ ಶಿಕ್ಷಕಿ ಜಯಂತಿ ಎಂಬವರ ಸಾಕುಪುತ್ರಿ ಜ್ಯೋತಿ (17) ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ಜಯಂತಿ ಅವರು ಮಿತೃ ವೃಂದದಲ್ಲಿ ನಡೆಯುತ್ತಿದ್ದ ಯೋಗ ತರಬೇತಿಗೆ ತೆರಳಿದ್ದಾಗ ಜ್ಯೋತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಯಂತಿ ಅವರು ಮನೆಗೆ ವಾಪಸ್ ಬಂದಾಗ ಫ್ಯಾನಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಜ್ಯೋತಿ ಮೃತದೇಹ ಪತ್ತೆಯಾಗಿದೆ. ಸೋಮೇಶ್ವರ ಪರಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಮುಗಿಸಿವ ಜ್ಯೋತಿ, ಬೆಸೆಂಟ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಪದವಿಗೆ ಸೇರಿದ್ದಳು, ಕಾಲೇಜು ಇನ್ನೂ ಆರಂಭವಾಗಿರಲಿಲ್ಲ.

ಪೊಲೀಸ್ ಕಿರುಕುಳ ಆರೋಪ : ಜ್ಯೋತಿ ಬರೆದಿಟ್ಟಿರುವ ಡೆತ್‌ನೋಟ್ ಲಭ್ಯವಾಗಿದ್ದು, ಅದರ ವಿವರ ಹೀಗಿದೆ. 'ಫೇಸ್ ಬುಕ್ ಮೂಲಕ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿರುವ ಪ್ರವೀಣ್ ಸಾಲ್ಯಾನ್ ಎಂಬಾತನ ಪರಿಚಯವಾಗಿ, ಮೊಬೈಲ್ ನಂಬರ್ ನೀಡಿದ್ದೆನು. ಬಳಿಕ ಪ್ರೀತಿ ಮಾಡಲು ಆರಂಭಿಸಿದ್ದು, ಒಂದು ಬಾರಿ ಮುಖಾಮುಖಿ ಮಾತನಾಡಿದ್ದೆ'.
'ಸಂಬಂಧಿಕರ ಬಳಿ, ಗೆಳೆಯರ ಬಳಿ ಮಾತನಾಡದಂತೆ ಆತ ಒತ್ತಡ ಹೇರುತ್ತಿದ್ದ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಒಡ್ಡುತ್ತಿದ್ದನಲ್ಲದೆ, 1 ಲಕ್ಷ ಹಣ, ಮತ್ತು ಚಿನ್ನಕ್ಕಾಗಿ ಬೆದರಿಸಿದ್ದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಬರೆದಿಟ್ಟಿದ್ದಾಳೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications