ಹಿಂದೂ ಕಾರ್ಯಕರ್ತರ ಮೇಲಿನ ಕೇಸ್‌ಗಳ ವಜಾಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹ
ಮಂಗಳೂರು, ಆಗಸ್ಟ್ 10: ರಾಜ್ಯ ಸರ್ಕಾರದ ನೂತನ ಗೃಹ ಸಚಿವರಾಗಿ ಕಟ್ಟಾ ಹಿಂದುತ್ವವಾದಿ ಆರಗ ಜ್ಞಾನೇಂದ್ರ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಲು ಒತ್ತಾಯ ಜೋರಾಗಿದೆ.
ಹಿಂದೂ ಸಂಘಟನೆಗಳ ಮುಖಂಡರ ಒತ್ತಾಯದ ಬೆನ್ನಲ್ಲೇ, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯೂ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ಕೇಸ್ ವಾಪಸು ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನ ವಿಕಾಸಸೌಧದಲ್ಲಿ ಭೇಟಿಯಾದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಹಾಕಲಾಗಿದ್ದ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ.
ವಿಕಾಸ ಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನೀಡಲಾಗಿದ್ದ ಮನವಿ ಪತ್ರವನ್ನು ನೀಡಿದ್ದಾರೆ. ಬಳಿಕ ಹಿಂದೂ ಸಂಘಟನೆಗಳಿಂದ ಬಂದ ಮನವಿ ಪತ್ರವನ್ನು ಆರಗ ಜ್ಞಾನೇಂದ್ರರಿಗೆ ನೀಡಿ, ಕೇಸ್ ವಾಪಾಸಾತಿ ಪಡೆಯುವ ಬಗ್ಗೆ ಮನವಿ ಮಾಡಿದ್ದಾರೆ.

ಕಾರ್ಯಕರ್ತರು ಇನ್ನೂ ಠಾಣೆಗಳಿಗೆ ಅಲೆದಾಟ ಮಾಡುತ್ತಿದ್ದಾರೆ
ರಾಜ್ಯದಲ್ಲಿ ಈ ಹಿಂದಿನ ಸರ್ಕಾರ ಅನ್ಯ ಸಂಘಟನೆಯ ಕಾರ್ಯಕರ್ತರ ಪ್ರಕರಣಗಳನ್ನು ಹಿಂದಿನ ಸರ್ಕಾರ ವಾಪಸ್ ಪಡೆದಿದೆ. ಆದರೆ ಆರ್‌ಎಸ್‌ಎಸ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಸುಳ್ಳು ಕೇಸ್‌ಗಳು ಇನ್ನೂ ಹಾಗೆಯೇ ಇದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಕಾರ್ಯಕರ್ತರು ಸುಳ್ಳು ಕೇಸ್‌ಗಳ ಹಿನ್ನಲೆ ಇನ್ನೂ ಠಾಣೆಗಳಿಗೆ ಅಲೆದಾಟ ಮಾಡುತ್ತಿದ್ದಾರೆ. ಹೀಗಾಗಿ ಅಮಾಯಕ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯಬೇಕೆಂದು ಕೋಟಾ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮನವಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ಠಾಣೆಗಳಿಂದ ಮಾಹಿತಿ ಪಡೆದುಕೊಂಡು ಸಚಿವ ಸಂಪುಟದ ಮುಂದೆ ಮಂಡಿಸಿ, ಸುಳ್ಳು ಕೇಸುಗಳನ್ನು ವಾಪಸ್ ಪಡೆಯುವ ಭರವಸೆ ನೀಡಿದ್ದಾರೆ.

ಇಲ್ಲಿಯವರೆಗೆ ಯಾವುದೇ ಕೇಸ್‌ಗಳನ್ನು ಹಿಂಪಡೆದಿಲ್ಲ
ಮಂಗಳೂರಿನ ಗಲಭೆ ಸೇರಿದಂತೆ ಕರಾವಳಿ, ಮಲೆನಾಡಿದ್ಯಂತ ನಡೆದ ಸಣ್ಣಪುಟ್ಟ ಘಟನೆಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಆದಾಗ, ಸಿದ್ದರಾಮಯ್ಯ ಸರ್ಕಾರ ಎಲ್ಲಾ ಕೇಸ್‌ಗಳನ್ನು ವಜಾ ಮಾಡಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಇಲ್ಲಿಯವರೆಗೆ ಯಾವುದೇ ಕೇಸ್‌ಗಳನ್ನು ಹಿಂಪಡೆದಿಲ್ಲ. ಚುನಾವಣೆಯ ಮೊದಲು ಕೊಟ್ಟ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಸಂಘದ ಹಿನ್ನಲೆಯಿಂದ ಬಂದು ಗೃಹ ಸಚಿವರಾದ ತಾವು ಕೇಸ್‌ಗಳನ್ನು ಹಿಂಪಡೆಯುತ್ತೀರಿ ಎಂದು ಭಾವಿಸುತ್ತೇವೆ ಎಂದು ಹಿಂದೂ ಸಂಘಟನೆಗಳ ಮುಖಂಡರು ಸಹ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿದ್ದರು.

ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ವಜಾ ಎಂದಿದ್ದರು
2018ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ರಾಜ್ಯ ಬಿಜೆಪಿ ಪ್ರಚಾರ ಸಮಾವೇಶ ಮಾಡಿತ್ತು. ಈ ವೇಳೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು, ಕೇಂದ್ರ ನಾಯಕರೂ ವೇದಿಕೆಯಲ್ಲಿದ್ದರು. ಈ ವೇಳೆ ಭಾಷಣ ಮಾಡಿದ ಬಿ. ಶ್ರೀರಾಮುಲು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರಾಜ್ಯದ ಹಿಂದೂ ಕಾರ್ಯಕರ್ತರ ಮೇಲಿನ ಎಲ್ಲಾ ಕೇಸ್‌ಗಳನ್ನು ವಜಾ ಮಾಡಬೇಕೆಂದು ಗುಡುಗಿದ್ದರು.

ಶ್ರೀರಾಮುಲು ಭಾಷಣದ ತುಣುಕು ವೈರಲ್
ಬಿ. ಶ್ರೀರಾಮುಲು ಆಗ್ರಹಕ್ಕೆ ನೆರೆದಿದ್ದ ಸಾವಿರಾರು ಜನ ಶಿಳ್ಳೆ, ಚಪ್ಪಾಳೆಗಳ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಕಾರ್ಯಕರ್ತರು ಅಂದುಕೊಂಡಂತೇ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೇರಿದರು. ಆದರೆ ಕಾರ್ಯಕರ್ತರ ಕೇಸ್‌ಗಳು ಮಾತ್ರ ಠಾಣೆಯ ಫೈಲ್ ನಿಂದ ಅಳಿಸಿಲ್ಲ. ಶ್ರೀರಾಮುಲು ಅಂದಿನ ಭಾಷಣದ ತುಣುಕು ಸದ್ಯ ಕರಾವಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕರ ಇಬ್ಬಗೆಯ ನೀತಿ ಬಗ್ಗೆ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications