ಮಂಗಳೂರು: ರಾಜೀನಾಮೆ ನೀಡುತ್ತೇನೆ ಎಂದ ಇಂಜಿನಿಯರ್‌ನ್ನ ಸಭೆಯಿಂದಲೇ ಹೊರಕಳಿಸಿದ ಸಚಿವ ಬೈರತಿ ಸುರೇಶ್
ಮಂಗಳೂರು, ನವೆಂಬರ್ 25: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಮುಖ್ಯ ಇಂಜಿನಿಯರ್ ಅನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸಭೆಯಿಂದಲೇ ಹೊರಗೆ ಕಳುಹಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಮನಪಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿದ್ಯಮಾನ ನಡೆದಿದೆ. ಕೆಯುಐಡಿಎಫ್‌ಸಿ ಕಾಮಗಾರಿ ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ ಎಂಬ ವಿಚಾರದಲ್ಲಿ ಸಚಿವರು, ಕೆಯುಐಡಿಎಫ್‌ಸಿ ಮುಖ್ಯ ಇಂಜಿನಿಯರ್ ಜಯರಾಂರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದೀರಾ ಎಂದು ಇಂಜಿನಿಯರ್ ಮೇಲೆ ಸಚಿವ ಬೈರತಿ ಸುರೇಶ್ ಫುಲ್ ಗರಂ ಆಗಿದ್ದಾರೆ.
ಈ ವೇಳೆ ಇಂಜಿನಿಯರ್ ಜಯರಾಮ್, 'ಹಾಗಾದರೆ ತಾನು ಕೆಲಸಕ್ಕೆ ರಾಜೀನಾಮೆ ನೀಡುತ್ತೇನೆ' ಎಂದಿದ್ದಾರೆ. ಇದರಿಂದ ಕೆಂಡಾಮಂಡಲವಾದ ಸಚಿವ ಬೈರತಿ ಸುರೇಶ್, 'ಗೆಟ್ ಔಟ್ ಫ್ರಂ ಹಿಯರ್' ಎಂದು ಕಿಡಿಕಾರಿದ್ದಾರೆ. ಆ ಬಳಿಕ ಅವರನ್ನು ಒಂದೂ ಮಾತನಾಡಲು ಬಿಡದೆ ಇಲ್ಲಿಂದ ಹೊರನಡೆಯಿರಿ ಅಂದಿದ್ದಾರೆ. ಕೊನೆಗೆ ಜಯರಾಂ ಅವರು ಸಭೆಯಿಂದ ಹೊರನಡೆದಿದ್ದಾರೆ. ಜಯರಾಮ್ ಅವರು ಕೆಯುಐಡಿಎಫ್‌ಸಿ ಮುಖ್ಯ ಇಂಜಿನಿಯರ್ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಮುಂದಿನ ಚುನಾವಣೆಗೆ ಸಿದ್ಧರಾಗಲು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ತಾಯಿ ಇದ್ದಂತೆ. ಕಾಂಗ್ರೆಸ್ ಇಲ್ಲದೆ ನಮ್ಮ ಅಸ್ತಿತ್ವವಿಲ್ಲ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಸರಕಾರವಾಗಿದ್ದು, ಜನಪರವಾದ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪಕ್ಷವನ್ನು ಕರಾವಳಿ ಪ್ರದೇಶದಲ್ಲೂ ಸಂಘಟಿಸಿ ಮಂಬರುವ ಚುನಾವಣೆಗಳನ್ನು ಗೆದ್ದು ಜನರ ಸೇವೆ ಮಾಡುವ ಅವಕಾಶ ಪಡೆದುಕೊಳ್ಳಬೇಕು ಎಂದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನೇತೃತ್ವದ ಕಾರ್ಯಕ್ರಮದಲ್ಲಿ ಬಿ.ರಮಾನಾಥ ರೈ, ಐವನ್ ಡಿಸೋಜ, ಕಾಂಗ್ರೆಸ್ ಪಕ್ಷದ ಮುಖಂಡರಾದ
ಜಿ.ಕೃಷ್ಣಪ್ಪ, ರಕ್ಷಿತ್ ಶಿವರಾಮ್, ಪದ್ಮರಾಜ್.ಆರ್, ಶಶಿಧರ್ ಹೆಗ್ಡೆ, ಸುರೇಶ್ ಬಳ್ಳಾಲ್, ಪ್ರವೀಣ್ ಚಂದ್ರ ಆಳ್ವ, ಶಾಲೆಟ್ ಪಿಂಟೊ, ಸುರೇಂದ್ರ ಕಂಬಳಿ, ಬೇಬಿ ಕುಂದರ್, ವಿಶ್ವಾಸ್ ದಾಸ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications