ಕೃಷಿಯೇ ಬದುಕಿಗೆ ಆಧಾರ; 13 ಎಕರೆಯಲ್ಲಿ ಅಡಿಕೆ ತೋಟ ಮಾಡಿದ ಇಂಜಿನಿಯರ್

ಮಂಗಳೂರು, ಜನವರಿ 30; ದೇಶದ ಭವಿಷ್ಯ ಇರೋದು ಕೃಷಿಯಲ್ಲಿ. ಕೃಷಿಯಿಂದ ಮಾತ್ರ ಖುಷಿಯಾಗಿರೋಕೆ ಸಾಧ್ಯ ಅನ್ನೋದು ಕೃಷಿಯಲ್ಲಿ ಪರಿಣಿತಿ ಹೊಂದಿರುವ ಸರ್ವರ ಮಾತು. ಇದಕ್ಕೆ ಪೂರಕ ಎಂಬಂತೆ ಲಾಕ್ ಡೌನ್ ನಂತರ ಅತೀ ಹೆಚ್ಚು ಸಂಖ್ಯೆಯಲ್ಲಿ ಯುವಕರು ಕೃಷಿಯಲ್ಲಿ ಪಾಲ್ಗೊಂಡಿದ್ದಾರೆ‌‌. ಕೃಷಿಯನ್ನು ನಂಬಿವನಿಗೆ ಭೂಮಿ ತಾಯಿ ಎಂದೂ ಕೈ ಬಿಡಲ್ಲ ಅನ್ನೋದು ಕೃಷಿ ನೆಚ್ಚಿಕೊಂಡ ಯುವಕರ ಅಭಿಪ್ರಾಯವಾಗಿದೆ.

ಇದೇ ಭಾವನೆಯನ್ನು ಹೊಂದಿದ ಕರಾವಳಿಯ ಯುವಕನೊಬ್ಬ ಅತೀ ದೊಡ್ಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಮೆಕಾನಿಕಲ್ ಇಂಜಿನಿಯರ್ ಆದರೂ ಕೃಷಿಯಲ್ಲಿ ಖುಷಿ ಕಾಣುವ ಉದ್ದೇಶದಿಂದ 13 ಎಕರೆಯ ಗುಡ್ಡದ ಮೇಲೆ ಹಸಿರ ರಂಗೋಲಿ ಬಿಡಿಸಲು ಮುಂದಾಗಿದ್ದಾರೆ.

ಇಂತಹ ವಿಶೇಷ ಪ್ರಯತ್ನಕ್ಕೆ ಕೈ ಹಾಕಿರೋದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದ ಹಳೆನೇರೆಂಕಿ ಗ್ರಾಮದ ಇಜ್ಜಾವು ನಿವಾಸಿ ಶಿವಪ್ರಸಾದ್‌ ಆಚಾರ್ಯ. ತನ್ನ ಮನೆಯ ಹಿಂಬದಿಯ ಗುಡ್ಡದ ಮೇಲೆ ಖಾಲಿಯಾಗಿದ್ದ ಸುಮಾರು 13 ಎಕರೆ ಜಾಗದಲ್ಲಿ ಪ್ರತ್ಯೇಕವಾದ ರೀತಿಯಲ್ಲಿ ಗುಂಡಿಗಳನ್ನು ತೋಡಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ.

ಗುಡ್ಡವನ್ನು ಇಳಿಜಾರು ರೀತಿಯಲ್ಲಿ ತಟ್ಟು ಮಾಡಿ, ನಡುನಡುವೆ ರಸ್ತೆ, ಎತ್ತರದಲ್ಲಿ ಭಾರೀ ಗಾತ್ರದ ನೀರಿನ ಟ್ಯಾಂಕ್‌ ನಿರ್ಮಿಸಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಾರೆ. ಈ ಮೂಲಕ ಅಡಕೆ ಕೃಷಿಗೆ ಮುಂದಾಗಿದ್ದಾರೆ.

ಅಡಕೆ ತೋಟ ಮಾಡಲು ಮುಂದಾದರು

ಅಡಕೆ ತೋಟ ಮಾಡಲು ಮುಂದಾದರು

ವೃತ್ತಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಶಿವಪ್ರಸಾದ್‌ ಆಚಾರ್ಯ ಕಟ್ಟಡ ನಿರ್ಮಾಣ ವೃತ್ತಿಯನ್ನೂ ಮಾಡುತ್ತಾರೆ. ಮನೆಯಲ್ಲಿ ಕೃಷಿ ಪರಂಪರೆ ಇದ್ದರೂ, ಹಿರಿಯರಿಂದ ಬಂದ ಭೂಮಿಯಲ್ಲಿ ವಿಶೇಷವಾದ ರೀತಿಯಲ್ಲಿ ಅಡಿಕೆ ಕೃಷಿ ಮಾಡಲು ಮುಂದಾಗಿದ್ದಾರೆ. ಶಿವಪ್ರಸಾದ್ ಆಚಾರ್ಯ ಬಳಿ ಸ್ವಂತ ಹಿಟಾಚಿ ಇದ್ದು, ಕೊರೊನಾ ಕಾಲದಲ್ಲಿ ಹಿಟಾಚಿಗೆ ಕೆಲಸ ಇರಲಿಲ್ಲ. ಈ ಸಮಯದಲ್ಲಿ ಸ್ವಂತ ಕೃಷಿಗೆ ಹಿಟಾಚಿ ಬಳಸಲು ನಿರ್ಧರಿಸಿ ಗುಡ್ಡವನ್ನು ತಟ್ಟು ಮಾಡುವ ಕೆಲಸ ಆರಂಭಿಸಿದ್ದರು. ಈ ಕಾರ್ಯಕ್ಕೆ ಸರಿ ಸುಮಾರು 6 ತಿಂಗಳು ಹಿಡಿದಿದೆ. ಸುಮಾರು 13 ಎಕರೆ ಗುಡ್ಡ ಜಾಗದಲ್ಲಿದ್ದ ಗಿಡಗಂಟಿಗಳನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಆಲೋಚನೆ

ಭವಿಷ್ಯದ ದೃಷ್ಟಿಯಿಂದ ಆಲೋಚನೆ

ಸುಮಾರು 2.5 ಅಡಿ ಅಗಲ, 2 ಅಡಿ ಆಳದ ಗುಂಡಿಗಳನ್ನು ತೋಡಿ ಅಡಕೆ ಗಿಡ ನೆಡಲಾಗಿದೆ. ಜತೆಗೆ 6 ಗಿಡಗಳ ನಡುವೆ ರಸ್ತೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ಗಿಡಗಳಿಗೆ ಔಷಧ ಸಿಂಪಡನೆ ಮಾಡಲು, ಅಡಿಕೆ ಫ‌ಸಲು ಕೊಯ್ಯಲು ಮತ್ತು ಸಾಗಾಟಕ್ಕೆ ಉಪಯೋಗಿಸುವ ದೂರದೃಷ್ಟಿಯಿಂದ ಈ ರಸ್ತೆ ನಿರ್ಮಿಸಲಾಗಿದೆ.

ವ್ಯವಸ್ಥಿತವಾಗಿ ನಿರ್ಮಿಸಲಾದ ತೋಟದಲ್ಲಿ ಅರ್ಧದಷ್ಟು ಮಂಗಳಾ ಮತ್ತು ಇನ್ನರ್ಧದಷ್ಟು ರತ್ನಗಿರಿ ತಳಿಯ ಸುಮಾರು 4 ಸಾವಿರ ಅಡಿಕೆ ಗಿಡಗಳನ್ನು ನಾಟಿ ಮಾಡಲಾಗಿದೆ. ಗುಡ್ಡದ ಎತ್ತರದಲ್ಲಿ 30 ಅಡಿ ಸುತ್ತಳತೆ ಮತ್ತು 25 ಅಡಿ ಆಳದ ಟ್ಯಾಂಕ್‌ ನಿರ್ಮಿಸಿದ್ದು, ಟ್ಯಾಂಕ್‌ನ ಸುತ್ತ 14 ಅಡಿಗಳಷ್ಟು ಮಣ್ಣು ಹಾಗೇ ಬಿಡಲಾಗಿದೆ. 2 ಕೊಳವೆ ಬಾವಿಗಳಿಂದ ಈ ಟ್ಯಾಂಕ್‌ಗೆ ನೀರು ತುಂಬಲಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಶಿವಪ್ರಸಾದ್‌ ರೂಪಿಸಿರುವ ವಿಶೇಷ ತೋಟ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಭವಿಷ್ಯದ ಮುಂದಾಲೋಚನೆಯಂತೆ ಒಂದು ಗಿಡಕ್ಕೆ ಎರಡು ಡ್ರಿಪ್‌ ಅಳವಡಿಸಲಾಗಿದೆ. ಒಂದು ತಾಸಿನಲ್ಲಿ 8 ಲೀಟರ್‌ ನೀರು ಗಿಡಕ್ಕೆ ಬೀಳುತ್ತದೆ. ಅಷ್ಟೂ ನಾಲ್ಕು ಸಾವಿರ ಗಿಡಗಳಿಗೆ ಕೇವಲ ಒಂದು ತಾಸಿನಲ್ಲಿ ನೀರು ಉಣಿಸಲಾಗುತ್ತದೆ. ವಿಶೇಷವೆಂದರೆ ಇದೇ ಹನಿ ನೀರು ವ್ಯವಸ್ಥೆಯಲ್ಲಿ 20 ಸಾವಿರ ಗಿಡಗಳಿಗೆ ಏಕಕಾಲದಲ್ಲಿ ನೀರುಣಿಸಬಹುದು.

ಮಾತ್ರವಲ್ಲದೇ ಈ ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್‌ ಅಳವಡಿಸಲಾಗಿದೆ. ಅದರ ಮೂಲಕ ಗಿಡಗಳಿಗೆ ರಸಗೊಬ್ಬರವನ್ನು ದ್ರವರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಈಗಿನ ನಿರ್ವಹಣೆ ದಿನದಲ್ಲಿ ಕೇವಲ ಒಂದು ತಾಸು ಅಷ್ಟೇ. ಈ ಅಡಿಕೆ ತೋಟದ ನಿರ್ಮಾಣಕ್ಕೆ ಸುಮಾರು 20 ಲಕ್ಷ ರೂ ಖರ್ಚು ಮಾಡಲಾಗಿದೆ.

ಹೊಸ ಪ್ರಯೋಗದ ಬಗ್ಗೆ ಮಾತ್ರ

ಹೊಸ ಪ್ರಯೋಗದ ಬಗ್ಗೆ ಮಾತ್ರ

ಈ ಬಗ್ಗೆ ಮಾತನಾಡಿರುವ ಶಿವಪ್ರಸಾದ್ ಆಚಾರ್ಯ, "ಮತ್ತಷ್ಟು ಸ್ವಾವಲಂಬಿಯಾಗುವ ಉದ್ದೇಶದಿಂದ ಈ ಸಾಹಸಕ್ಕೆ ಕೈ ಹಾಕಿದೆ. ಕೊರೊನಾ ಲಾಕ್ ಡೌನ್ ಆದಾಗ ಜೀವನಕ್ಕೆ ಕೃಷಿಯೊಂದೇ ಆಧಾರ ಅಂತಾ ಮನವರಿಕೆ ಆಯಿತು. ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಅಡಕೆ ತೋಟ ನಿರ್ಮಾಣ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಗಳಲ್ಲಿ ಫಸಲು ತೆಗೆಯುವ ವಿಶ್ವಾಸ ಇದೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+