ಪ್ರವೀಣ್ ಹತ್ಯೆ, ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ, ಬಿಜೆಪಿಗೆ ಯುವ ಮುಖಂಡರ ರಾಜೀನಾಮೆ
ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆಯನ್ನು ಖಂಡಿಸಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮಂಗಳೂರು, ಜುಲೈ 27: ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆಯನ್ನು ಖಂಡಿಸಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಂಗಳವಾರ ರಾತ್ರಿ ತನ್ನ ಕೋಳಿ ಅಂಗಡಿಯನ್ನು ಮುಚ್ಚುತ್ತಿದ್ದ ವೇಳೆ ಮಾಡಿದ ದುಷ್ಕರ್ಮಿಗಳು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನಟ್ಟಾರೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಘಟನೆ ನಡೆಯುತ್ತಿದ್ದಂತೆ ದಕ್ಷಿಣ ಕನ್ನಡದ ಕೆಲವು ತಾಲೂಕುಗಳಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೂ ಸಾಮಾಜಿಕ ಜಾಲಾತಾಣದಲ್ಲೂ ಬಿಜೆಪಿ ಸರಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಙಾನೇಂದ್ರ ವಿರುದ್ಧ ಹಲವರು ಕಿಡಿ ಕಾರಿದ್ದಾರೆ. ಹಿಂದೂ ಕಾರ್ಯಕರ್ತರ ಶವಗಳ ಮೇಲೆ ಅಧಿಕಾರ ಗದ್ದುಗೆ ಏರಿ ದುರಹಂಕಾರದ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ಅಂಧ ಆಡಳಿತ ಮಾಡಿದ ಬಿಜೆಪಿ ಈ ಸಾರಿ ಶವಗಳ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳಲಿದೆ, ಬರೆದಿಟ್ಟುಕೊಳ್ಳಿ ಎಂದು ಫೇಸ್‌ಬುಕ್ ಬಳಕೆದಾರನೊಬ್ಬ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪ್ರವೀಣ್ ನೆಟ್ಟಾರು ಸಾವಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಸಂತಾಪದ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಲವಾರು ಮಂದಿ ನೀವು ಇನ್ನು ಎಷ್ಟು ಮಂದಿಗೆ ಓಂ ಶಾಂತಿ ಎಂದು ಬರೆಯುತ್ತೀರಾ, ಸತ್ತ ಮೇಲೆ ಬಂದು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತೀರಾ, ನಿಮ್ಮನ್ನು ಸರಕಾರದಲ್ಲಿ ಕೂರಿಸಿದ್ದಕ್ಕೆ ಹಿಂದೂ ಸಮಾಜಕ್ಕೆ ಸಿಗುತ್ತಿರುವ ಕೊಡುಗೆಗಳು ಇಂತಹ ಹತ್ಯೆ, ಇಂತಹ ಸರಕಾರಗಳನ್ನು ಕಿತ್ತೊಗೆಯಬೇಕು ಎಂದು ಕಿಡಿಕಾರಿದ್ದಾರೆ.

ಗೃಹಸಚಿವರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಆಗ್ರಹ
"ಗೃಹ ಸಚಿವರೆ ದಯವಿಟ್ಟು ನೀವು ರಾಜೀನಾಮೆ ಕೊಟ್ಟು ಬೇರೆದವರಿಗೆ ಸಚಿವರಾಗಲು ಬಿಡಿ ನಿಮ್ಮಿಂದ ಇಂತಹ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ದಯವಿಟ್ಟು ಗೃಹ ಇಲಾಖೆಯಿಂದ ನಿವೃತ್ತಿ ಹೊಂದಿ, ಬೇರೆ ಯಾವುದಾದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯನ್ನು ಖಾತೆಯ ಸ್ಥಾನವನ್ನು ತೆಗೆದುಕೊಳ್ಳಿ ಎಂದು ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ ಆರಗ ಜ್ಞಾನೇಂದ್ರಗೆ ಸಲಹೆ ನೀಡಿದ್ದಾರೆ.

ಯುವಕರಿಂದ ಬಿಜೆಪಿ ಯುವ ಮೋರ್ಚಾಗೆ ರಾಜೀನಾಮೆ
ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿಯ ಶೃಂಗೇರಿ ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಸುನೀಲ್ ಸಂಪೆಕೊಳಲು ಎಂಬಾತ ರಾಜೀನಾಮೆ ನೀಡಿದ್ದು, ನಾವು ಹಿಂದುಗಳ ಪರವೇ ಹೊರತು , ನಕಲಿ ಹಿಂದೂಗಳ ಪರ ಅಲ್ಲ ಎಂದು ತಿಳಿಸಿದ್ದಾರೆ.
ಮೂಡಿಗೆರೆ, ಕೊಪ್ಪ, ಸೇರಿದಂತೆ ಹಲವೆಡೆ ಯುವ ಮೋರ್ಚಾದ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಯುವ ಮುಖಂಡರು ರಾಜೀನಾಮೆ ಸಲ್ಲಿಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಬೆಂಗಳೂರಿನ ರಾಜಾರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಸಾಮಾಜಿಕ ಜಾಲಾತಾಣದ ಸಂಚಾಲಕ ಶ್ರೀನಿವಾಸ್ ಗೌಡ ಎಂಬಾತನೂ ತಾನೂ ಇಂದಿನಿಂದ ಎಲ್ಲಾ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.

ಕೊಲೆಗಡುಕರಿಗೆ ಭಯವಿಲ್ಲವಾಗಿದೆ
ಇತ್ತೀಚೆಗೆ ಸಮಾಜ ಘಾತುಕ ಶಕ್ತಿಗಳು, ಕೊಲೆಗಡುಕರಿಗೆ ಸರಕಾರದ ಭಯವಿಲ್ಲ ಎಂಬುದು ಕೆಲವು ದಿನಗಳಲ್ಲಿ ಆದಂತಹ ಘಟನೆಗಳೇ ಸಾಕ್ಷಿ. ಈ ಸರಕಾರದಲ್ಲಿ ಜನಸಾಮಾನ್ಯರಿಗೂ ರಕ್ಷಣೆ ನೆಮ್ಮದಿಯ ವಾತಾವರಣ ಇಲ್ಲ. ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಅವಧಿಯಲ್ಲಿ ಮಸೂದ್ ಮತ್ತು ಪ್ರವೀಣ್ ಹತ್ಯೆಯಾಗಿದ್ದು ಅತ್ಯಂತ ನೋವಿನ ವಿಚಾರ. ಗೂಂಡಾಗಳಿಗೆ, ಕೊಲೆಗಡುಕರಿಗೆ ಸರಕಾರ ಮತ್ತು ಕಾನೂನಿನ ಭಯವಿಲ್ಲ ಎಂದು ಇದರಿಂದ ಸಾಬೀತಾಗಿದೆ. ಈ ಹಿಂದೆ ಆದ ಘಟನೆಯನ್ನು ಸೂಕ್ಷ್ಮತೆಯನ್ನು ಅರಿತುಕೊಂಡು ಮುಂಜಾಗ್ರತೆ ಮಾಡುವ ಜವಾಬ್ದಾರಿ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದು ಎಂದು ತಿಳಿಸಿದ್ದಾರೆ.

ಗರಿಷ್ಠ ಮೊತ್ತದ ಪರಿಹಾರಕ್ಕೆ ಆಗ್ರಹ
ಪ್ರವೀಣ್ ಹತ್ಯೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ ಶಾಸಕ ಯು.ಟಿ.ಖಾದರ್, ಈ ಎಲ್ಲಾ ಘಟನೆಗಳನ್ನು ಭೇದಿಸುವುದರ ಮೂಲಕ ನೈಜ ಅಪರಾಧಿಗಳನ್ನು ಆದಷ್ಟು ಬೇಗನೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಸರಕಾರ ಮೃತ ಮಶೂದ್ ಮತ್ತು ಪ್ರವೀಣ್ ರವರ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕೆಂದು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಎಲ್ಲಾ ಜಾತಿ, ಮತ, ವರ್ಗದವರು ಒಂದಾಗಿ ಯಾರೇ ಸಮಾಜ ಘಾತುಕ ಶಕ್ತಿಗಳು, ಕೊಲೆಗಡುಕರು ಆಗಲಿ ಅವರ ವಿರುದ್ಧ ಹೋರಾಡಲು ಒಟ್ಟಾಗಿ ಮುಂದಾಗಬೇಕು ಮತ್ತು ಇಂತಹ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಒಟ್ಟಾಗಿ ಒಂದಾಗಿ ಸಂಪೂರ್ಣ ಸಹಕಾರ ಕೊಡಬೇಕೆಂದು ಯು.ಟಿ.ಖಾದರ್ ಮನವಿ ಮಾಡಿದ್ದಾರೆ.












Click it and Unblock the Notifications