ಮೋದಿಯವರ 'ಮನ್ ಕಿ ಬಾತ್ ' ಆಲಿಸುತ್ತಲೇ ಹಸೆಮಣೆ ಏರಿದ ನವಜೋಡಿ
ಮಂಗಳೂರು, ಫೆಬ್ರವರಿ 25:ಮದುವೆ ಛತ್ರ ಅಂದರೆ ಅಲ್ಲಿ ಮಂತ್ರ ಘೋಷ, ಗಟ್ಟಿಮೇಳ, ಹಾಡು, ಲಲನೆಯರ ನಗು, ಹಿರಿಯರ ಮಾತು, ಮಕ್ಕಳ ಚಿಲಿಪಿಲಿ ಇದ್ದೇ ಇರುತ್ತೆ. ಆದರೆ ಇಲ್ಲೊಂದು ಮದುವೆ ಮಂಟಪದಲ್ಲಿ ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕೇಳುತ್ತಿತ್ತು. ಹೌದು, ಇಂತಹದೊಂದು ಅಪರೂಪದ ಮದುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಮದುವೆ ಹಾಲ್ ನಲ್ಲಿ ನಿನ್ನೆ ಮಂತ್ರ ಘೋಷಗಳು ಕೇಳಿ ಬರುತ್ತಿರಲಿಲ್ಲ. ಅಲ್ಲಿ ಕೇಳಿ ಬರುತ್ತಿದ್ದದ್ದು ಪ್ರಧಾನಿ ಮೋದಿ ಅವರ ಮನ್ ಕೀ ಬಾತ್....ಸುಳ್ಯ ಬಿಜೆಪಿ ಕಾರ್ಯಕರ್ತ ಜಯರಾಮ ಪ್ರಧಾನಿ ನರೇಂದ್ರ ಮೋದಿಯವರ 53 ನೇ ಮನದ ಮಾತು ಕೇಳುತ್ತಲೇ ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.

ಸುಳ್ಯ ನಗರದ ಮಹಾವಿಷ್ಣು ದೇವಸ್ಥಾನ ಕಾಯರ್ತೋಡಿಯಲ್ಲಿ ಜಯರಾಮ, ದಮಯಂತಿಯೊಂದಿಗೆ ಹಸೆಮಣೆ ಏರಿದ್ದು ಮೋದಿ ಮನದ ಮಾತು ಆಲಿಸುತ್ತಲೇ ಮದುವೆಯಾಗಿದ್ದಾರೆ. 11.30 ರ ಧಾರಾ ಮುಹೂರ್ತದಲ್ಲಿ ಮದುವೆಯಾದ ಜಯರಾಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ನೆನೆಯಿತ್ತಿರುವ ಮಾತನ್ನು ಆಲಿಸುತ್ತಾ ವಧುವಿಗೆ ತಾಳಿ ಕಟ್ಟಿದರು.
ಜನರ ಆಶೀರ್ವಾದ ಪಡೆಯುವ ಮೊದಲೇ ನವ ವಧುವರರು ಪ್ರಧಾನಿಯವರ 'ಮನ್ ಕಿ ಬಾತ್' ಆಲಿಸಲು ಮಂಟಪ ಬಿಟ್ಟು ರೇಡಿಯೋದ ಎದುರಿಗೆ ಬಂದು, ಎಲ್ಲ ಬಂಧುಗಳೊಂದಿಗೆ ಕುಳಿತು ಮೋದಿಯ ಮನದ ಮಾತಿಗೆ ಸಾಕ್ಷಿಗಳಾದರು.

ಮನದ ಮಾತು ಕೇಳಿಸಿಕೊಳ್ಳುವುದಕ್ಕಾಗಿ ವಿಶೇಷವಾಗಿ ರೇಡಿಯೋ ಮತ್ತು ಸ್ಪೀಕರ್ ನ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಬಂಧು ಮಿತ್ರರು ಒಂದೆಡೆ ಕೂತು ಮನದ ಮಾತನ್ನು ಆಲಿಸಿ ನವ ಜೋಡಿಯನ್ನು ಆಶೀರ್ವಾದಿಸಿದರು.












Click it and Unblock the Notifications