ಜೋಡುಪಾಲ ದುರಂತದಲ್ಲಿ ಮಗಳು ನಾಪತ್ತೆ: ಪ್ರತಿರೂಪಕ್ಕೆ ಅಂತ್ಯಸಂಸ್ಕಾರ ಮಾಡಿದ ಪೋಷಕರು
ಮಂಗಳೂರು, ಅಕ್ಟೋಬರ್ 12: ಕಳೆದ ಆಗಸ್ಟ್ 16 ರಂದು ಸಂಭವಿಸಿದ್ದ ದುರಂತದಿಂದ ಛಿದ್ರಗೊಂಡಿದ್ದ ಕೊಡಗು ಜಿಲ್ಲೆಯ ಗಡಿ ಪ್ರದೇಶ ಜೋಡುಪಾಲದಲ್ಲಿ ಈಗ ಜನಸಂಚಾರ ಆರಂಭವಾಗಿದೆ. ಜನರು ತಮ್ಮ ವಾಸ ಸ್ಥಾನಗಳಿಗೆ ಮರಳುತ್ತಿದ್ದಾರೆ.
ಜೋಡುಪಾಲದಲ್ಲಿ ಭಾರೀ ಭೂ ಕುಸಿತ, ಜಲಸ್ಪೋಟ ಸಂಭವಿಸಿ 57 ದಿನಗಳು ಕಳೆದಿವೆ. ಆದರೆ ದುರಂತದಲ್ಲಿ ಕಣ್ಮರೆಯಾದ ಮಂಜುಳಾ (15) ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಇದರಿಂದ ಮನ ನೊಂದಿರುವ ಆಕೆಯ ಪೋಷಕರು ಮಂಜುಳಾ ಪ್ರತಿರೂಪ ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ವಿಧಿವಿಧಾನ ಪೂರೈಸಿದ್ದಾರೆ.
ಕೊಡಗಿನ ಬೆಟ್ಟತ್ತೂರು ನಿವಾಸಿ ಸೋಮಯ್ಯ ಅವರ ಪುತ್ರಿ ಮಂಜಳಾ, ಮದೆನಾಡಿನ ಮದೆಮಹೇಶ್ವರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ ಸಿ ವ್ಯಾಸಂಗ ಮಾಡುತ್ತಿದ್ದಳು.
ಬೆಟ್ಟತ್ತೂರಿನಿಂದ ಮದೆನಾಡು ಕಡೆಗೆ ಒಂದೇ ಬಸ್ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಆಕೆಯನ್ನು ಮದೆನಾಡು ಪಕ್ಕದ ಜೋಡುಪಾಲದ ತನ್ನ ಸಂಬಂಧಿಕರಾದ ಬಸಪ್ಪ ಅವರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮುಂದೆ ಓದಿ...

ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಂಜುಳಾ
ಆಗಸ್ಟ್ 16ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರೀ ಮಳೆಯಿಂದ ಸಂಭವಿಸಿದ ಜಲ ಸ್ಫೋಟದಿಂದಾಗಿ ಬೆಟ್ಟದ ಮೇಲಿಂದ ಭಾರೀ ಪ್ರಮಾಣದ ನೀರು ಬಸಪ್ಪ ಅವರ ಮನೆಗೆ ನುಗ್ಗಿತ್ತು. ಮನೆಯಲ್ಲಿದ್ದ ಬಸಪ್ಪ, ಗೌರಮ್ಮ, ಮೋನಿಶಾ ಸೇರಿದಂತೆ ಮಂಜುಳಾ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ನಾಪತ್ತೆಯಾದ ಸ್ಥಳದಲ್ಲೇ ಅಂತ್ಯ ಸಂಸ್ಕಾರ
ಮಂಜುಳಾ ಹೊರತುಪಡಿಸಿ ಬಸಪ್ಪ, ಗೌರಮ್ಮ, ಮೋನಿಶಾ ಅವರ ಮೂವರ ಶವಗಳು ಪತ್ತೆಯಾಗಿ ಅಂತ್ಯ ಸಂಸ್ಕಾರವೂ ನಡೆದಿದೆ. ಆದರೆ ಮಂಜುಳಾ ಮೃತ ದೇಹ ಈವರೆಗೆ ಪತ್ತೆಯಾಗಿಲ್ಲ.ಈ ಹಿನ್ನೆಲೆಯಲ್ಲಿ ಪೋಷಕರು ಮಂಜುಳಾ ನಾಪತ್ತೆಯಾದ ಸ್ಥಳದಲ್ಲೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಸಂಪ್ರದಾಯದಂತೆ ಮದುವೆ ಶಾಸ್ತ್ರ
ಅಡಿಕೆ ಹಾಳೆಯಲ್ಲಿ ಮಂಜುಳಾ ಪ್ರತಿರೂಪ ತಯಾರಿಸಿ, ಅದಕ್ಕೆ ರೇಷ್ಮೆ ಸೀರೆ ತೊಡಿಸಿ, ಆಕೆಯ ಇಷ್ಟದ ವ್ಯಾನಿಟಿ ಬ್ಯಾಗ್ ಹಾಗೂ ಆಕೆ ಥ್ರೋಬಾಲ್ ಕ್ರೀಡೆಯಲ್ಲಿ ಗೆದ್ದ ಪದಕ ತೊಡಿಸಿ ಪ್ರತಿರೂಪವನ್ನು ಮದುಮಗಳಂತೆ ಸಿಂಗರಿಸಿದರು. ತದನಂತರ ಕುಡಿಯ ಸಂಪ್ರದಾಯದಂತೆ ಮದುವೆ ಶಾಸ್ತ್ರವನ್ನೂ ನೆರವೇರಿಸಿದ್ದಾರೆ.

ಮಂಜುಳಾ ಸಹಪಾಠಿಗಳು ಭಾಗಿ
ಈ ಸಂದರ್ಭದಲ್ಲಿ ಮಂಜುಳಾ ಅವರ ತಂದೆ ಕುಡಿಯರ ಸೋಮಯ್ಯ ಮತ್ತು ತಾಯಿ ಜಯಂತಿ ಅವರ ಕಣ್ಣೀರು ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯಲ್ಲಿ ಮಂಜುಳಾ ಸಹಪಾಠಿಗಳು ಪಾಲ್ಗೊಂಡಿದ್ದರು. ನಂತರ ಮಂಜುಳಾ ಪ್ರತಿರೂಪವನ್ನು ಆಕೆಯ ಹುಟ್ಟೂರು ಬೆಟ್ಟತ್ತೂರುವಿಗೆ ಕೊಂಡೊಯ್ದು ಕುಟುಂಬಕ್ಕೆ ಸೇರಿದ ಸ್ಮಶಾನದಲ್ಲಿ ವಿದಿ ವಿಧಾನ ಮೂಲಕ ಪೂರೈಸಲಾಯಿತು.












Click it and Unblock the Notifications