'ನದಿ ಹರಿಯುತ್ತಿದೆ ಕಸ ಎಸೆಯ ಬೇಡಿ': ಪರಿಸರ ರಕ್ಷಣೆಗಾಗಿ ತನ್ನ ಮುಂಜಾನೆಯನ್ನೇ ಮುಡಿಪಿಟ್ಟ ಯುವಕ
ಮಂಗಳೂರು, ಜುಲೈ 14: ರಸ್ತೆ ಬದಿ ಕಸ ಎಸೆಯಬೇಡಿ. ಜಾಗ್ರತೆ ಪಕ್ಕದಲ್ಲೇ ನದಿ ಹರಿಯುತ್ತಿದೆ. ಕಸ ಎಸೆಯಬೇಡಿ ಎಂದು ಬರೆದಿರುವ ಫ್ಲೆಕಾರ್ಡ್ ಹಿಡಿದು ಜನರಲ್ಲಿ ಮಂಗಳೂರಿನ ಯುವಕನೋರ್ವ ಜಾಗೃತಿ ಮೂಡಿಸುತ್ತಿದ್ದಾರೆ. ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ರಸ್ತೆ ಬದಿ ಭಿತ್ತಿಪತ್ರ ಹಿಡಿದು ಏಕಾಂಗಿ ಹೋರಾಟವನ್ನು ಮಂಗಳೂರಿನ ಬಜಾಲ್ ನಿವಾಸಿ ನಾಗರಾಜ್ ಮಾಡುತ್ತಿದ್ದಾರೆ.
ಕಳೆದೆರೆಡು ತಿಂಗಳಿನಿಂದ ಬೆಳ್ಳಂಬೆಳಗ್ಗೆ 5.30ಯಿಂದ 9.30ಯವರೆಗೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್‌ನಲ್ಲಿ ಭಿತ್ತಿ ಪತ್ರ ಹಿಡಿದು ನಾಗರಾಜ್ ನಿಲ್ಲುತ್ತಿದ್ದಾರೆ. ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿರುವ ನಾಗರಾಜ್, ಬೆಳಗ್ಗೆ 9.30 ಬಳಿಕ ಕೆಲಸಕ್ಕೆ ಹೋಗುತ್ತಾರೆ. ಮಳೆ-ಗಾಳಿ-ಬಿಸಿಲೆನ್ನದೇ ಪ್ರತಿ ದಿನ ನಾಗರಾಜ್ ಪರಿಸರ ರಕ್ಷಣೆ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ.

'ರಸ್ತೆ ಬದಿ ಕಸ ಎಸೆಯಬೇಡಿ ಮತ್ತು ಜಾಗ್ರತೆ ಪಕ್ಕದಲ್ಲೇ ನದಿ ಹರಿಯುತ್ತಿದೆ. ಕಸ ಎಸೆಯಬೇಡಿ' ಎಂಬ ಎರಡು ಜಾಗೃತಿಯ ಫ್ಲೆಕಾರ್ಡ್‌ಗಳನ್ನು ನಾಗರಾಜ್ ಹಿಡಿಯುತ್ತಾರೆ. ಜನ ತ್ಯಾಜ್ಯ ಎಸೆಯುವ ಪ್ರದೇಶದಲ್ಲಿ ನಿಂತು ಫ್ಲೆಕಾರ್ಡ್ ಪ್ರದರ್ಶಿಸುತ್ತಿದ್ದಾರೆ. ನಾಗರಾಜ್ ಕಾರ್ಯದಿಂದ ಜನರಲ್ಲಿ ಸ್ವಲ್ಪಮಟ್ಟಿನ ಜಾಗೃತಿ ಮೂಡುತ್ತಿದ್ದು, ತ್ಯಾಜ್ಯ ಬೀಳುವ ಪ್ರಮಾಣವೂ ಕಡಿಮೆಯಾಗಿದೆ.
ಈ ಹಿಂದೆ ಉಳ್ಳಾಲದ ಬಳಿಯಿರುವ ನೇತ್ರಾವತಿ ಸೇತುವೆಯ ಬಳಿ ಫ್ಲೆಕಾರ್ಡ್ ಹಿಡಿದು ನಿಂತು ನಾಗರಾಜ್ ಜಾಗೃತಿ ಮೂಡಿಸಿದ್ದರು. ಈ ಸಂದರ್ಭದಲ್ಲಿ ಜನ ಅಲ್ಲಿ ತ್ಯಾಜ್ಯ ರಾಶಿ ನದಿಗೆ ಹಾಕುವುದನ್ನು ಬಹುಮಟ್ಟಿಗೆ ನಿಲ್ಲಿಸಿದ್ದರು. ಇದೀಗ ಅಡ್ಯಾರ್ ಹೆದ್ದಾರಿ ಬದಿಯಲ್ಲಿ ಜನರು ತ್ಯಾಜ್ಯಗಳ ಎಸೆಯುತ್ತಿದ್ದು, ತ್ಯಾಜ್ಯ ತಪ್ಪಿಸಲು ಹಿಂದಿನ ಮಾರ್ಗವನ್ನೇ ನಾಗರಾಜ್ ಅನುಸರಿಸಿದ್ದಾರೆ.
ಈ ಬಗ್ಗೆ ಸ್ವತಃ ನಾಗಾರಾಜ್ ಮಾತನಾಡಿದ್ದು, 'ಸ್ವಚ್ಛ ಭಾರತದ ಬಗ್ಗೆ ಎಷ್ಟೇ ಜಾಗೃತಿ ಕಾರ್ಯ ಮಾಡಿದರೂ ಜನ ಕಸ, ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ. ಇದಕ್ಕಾಗಿ ಜಾಗೃತಿ ಮೂಡಿಸಲು ನೇರವಾಗಿ ಜನರ ಬಳಿಯೇ ಹೋಗಲು ಈ ರೀತಿ ಬೋರ್ಡ್ ಹಿಡಿದುಕೊಂಡೆ. ಮೊದಲು ತೊಕ್ಕೊಟ್ಟು ನೇತ್ರಾವತಿ ನದಿ ಬಳಿ ನಿಂತುಕೊಂಡೆ. ಅಲ್ಲಿ ಜನ ಎಸೆಯುತ್ತಿದ್ದ ರಸ್ತೆ ಬದಿಯ ತ್ಯಾಜ್ಯ ಗಳ ಬಳಿಯೇ ಬೋರ್ಡ್ ಹಿಡಿದೆ. ಕೆಲವು ಜನ ನನ್ನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು. ಕೆಲವು ಜನ ಅಪಹಾಸ್ಯ ಮಾಡಿದರು. ನಿನಗೇನು ಕೆಲಸ ಇಲ್ವಾ ಅಂತಾ ಹಾಸ್ಯ ಮಾಡಿದರು. ಆದರೆ ದಿನಕಳೆದಂತೆ ಜನ ಕಸ ಎಸೆಯೋದನ್ನು ಕಡಿಮೆ ಮಾಡಿದರು ಎಂದರು.

ಇನ್ನು ತೊಕ್ಕೊಟ್ಟು ನೇತ್ರಾವತಿ ನದಿ ಬಳಿ ಜನ ಕಸ ಎಸೆಯೋದನ್ನು ಕಡಿಮೆ ಮಾಡಿದರು. ಆದರೆ ಅಡ್ಯಾರ್ ಬಳಿ ಜನ ಕಸ ಎಸೆಯೋದನ್ನು ಜಾಸ್ತಿ ಮಾಡಿದ್ದಾರೆ. ಹೀಗಾಗಿ ಅಡ್ಯಾರ್ ಬಳಿ ನಿಂತಿದ್ದೇನೆ. ಎರಡು ತಿಂಗಳಿನಿಂದ ಪ್ರತಿದಿನ ನಿಲ್ಲುತ್ತಿದ್ದೇನೆ. ಜನ ಕಸ ಎಸೆಯೋದನ್ನು ಕಡಿಮೆಯಾಗಿದೆ. ಪೂರ್ತಿ ಕಡಿಮೆ ಯಾಗೋವರೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications