ಸರಳವಾಸ್ತು ಚಂದ್ರಶೇಖರ್ ಗುರೂಜಿಗೆ ಮಂಗಳೂರಿನ ವಾಸ್ತುತಜ್ಞ ಸವಾಲು
ಮಂಗಳೂರು, ಜುಲೈ 10: ಇತ್ತೀಚಿನ ದಿನಗಳಲ್ಲಿ ಎಲ್ಲವೂ ವಾಸ್ತು ಪ್ರಕಾರವೇ ಆಗಬೇಕು ಎಂಬ ಮನೋಭಾವ ಹೆಚ್ಚಾಗುತ್ತಿದೆ. ಗೃಹ, ಸಂಪತ್ತು, ಆರೋಗ್ಯ, ಶಿಕ್ಷಣ, ವೃತ್ತಿ, ಸಂಬಂಧಗಳು ಹೀಗೆ ಜೀವನದ ಪ್ರತಿಯೊಂದು ಹಂತಕ್ಕೂ ವಾಸ್ತು ಅನುಸಾರವೇ ಆಗಬೇಕೆಂಬುದು ಪ್ರಚಲಿತದಲ್ಲಿದೆ.
ದಿನ ಬೆಳಗಾದರೆ ವಾಹಿನಿಗಳಲ್ಲಿ ವಾಸ್ತು ಶಾಸ್ತ್ರದ ಕುರಿತು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇನ್ನು ವಾಸ್ತು ಶಾಸ್ತ್ರಕ್ಕೆಂದೇ ಚಂದ್ರ ಶೇಖರ ಗುರೂಜಿ ಎಂಬುವವರು ಸರಳ ವಾಸ್ತು ಎಂಬ ವಾಹಿನಿಯನ್ನೇ ಆರಂಭಿಸಿದ್ದಾರೆ.
ಆದರೆ, ಮಂಗಳೂರಿನ ವಾಸ್ತು ತಜ್ಞ ಶೈಲೇಶ್ ಜೈನ್, ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ವಿರುದ್ಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕಿಡಿ ಕಾರಿದ್ದಾರೆ. ಸರಳವಾಸ್ತು ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲ, ಸರಳವಾಸ್ತು ವಿಚಾರದಲ್ಲಿ ಅವರಿಗೆ ಪಂಥಾಹ್ವಾನ ನೀಡಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಮಂಗಳೂರಿನಲ್ಲಿ ಕಾರ್ಯಕ್ರಮ ಒಂದನ್ನು ಆಯೋಜಿಸುವುದಾಗಿ ತಿಳಿಸಿರುವ ಶೈಲೇಶ್ ಜೈನ್, ಆ ಕಾರ್ಯಕ್ರಮದಲ್ಲಿ ಸರಳವಾಸ್ತು ಬಗ್ಗೆ ತಮ್ಮಲ್ಲಿ ಮುಖಾಮುಖಿ ಚರ್ಚೆ ನಡೆಸುವುದಾಗಿ ಪಂಥಾಹ್ವಾನ ನೀಡಿದ್ದಾರೆ.
ಚಂದ್ರಶೇಖರ್ ಗುರೂಜಿ ಸರಳವಾಸ್ತು ಹೆಸರಿನಲ್ಲಿ ವಾಸ್ತು ಶಾಸ್ತ್ರದ ನೈಜತೆ ಅಪಮೌಲ್ಯಗೊಳಿಸಿದ್ದಾರೆ ಎಂದು ಆರೋಪಿಸಿರುವ ಶೈಲೇಶ್ ಜೈನ್, ಸರಳವಾಸ್ತು ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ತಮ್ಮ ಸಿಬ್ಬಂದಿ ಮೂಲಕ ಚೀನಾ ಆಟಿಕೆ ವಸ್ತುಗಳನ್ನು ಪರಿಹಾರ ಎಂಬಂತೆ ಜನರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿದ್ದಾರೆ, ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಶೈಲೇಶ್ ಜೈನ್ ಆರೋಪಿಸಿದ್ದಾರೆ.

ಟಿವಿ ವಾಹಿನಿಯಲ್ಲಿ ಕುಳಿತು ಚಂದ್ರಶೇಖರ್ ಗುರೂಜಿ ನೀಡುವ ಪರಿಹಾರ ಕ್ರಮಗಳು ಹಾಸ್ಯಾಸ್ಪದವಾಗಿವೆ ಎಂದಿರುವ ಶೈಲೇಶ್ ಜೈನ್, ಮಂಗಳೂರಿನಲ್ಲಿ ಆಯೋಜಿಸುವ ಕಾರ್ಯಕ್ರಮಕ್ಕೆ ಬಂದು ಮುಖಾಮುಖಿ ಚರ್ಚಿಸುವಂತೆ ಆಹ್ವಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications