Mangaluru South Constituency: ಕಡಲನಗರಿಯಲ್ಲಿ ಆಧಿಪತ್ಯ ಸಾಧಿಸಲು ಹಾಲಿ-ಮಾಜಿ ಶಾಸಕರ ನಡುವೆ ಬಿಗ್ ಫೈಟ್
ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿರುವ ಮಂಗಳೂರು ನಗರದಲ್ಲಿ ಶಾಸಕರೆಷ್ಟು ಸ್ಮಾರ್ಟ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ಈ ಬಾರಿಯ ಚುನಾವಣೆಯ ಒಂದು ಹೈಲೈಟ್ಸ್ ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ಮಂಗಳೂರು ನಗರದ ಜನರ ಮೇಲೆ ಬೀಳುವುದು ನಿಶ್ಚಿತವಾಗಿದೆ.
ಅರಬ್ಬೀ ಸಮುದ್ರದ ದಂಡೆಯ ಮೇಲೆ ಶರವೇಗದಲ್ಲಿ ಬೆಳೆಯುತ್ತಿರುವ ನಮ್ಮ ರಾಜ್ಯದ ಹೆಮ್ಮೆಯ ಕಡಲನಗರಿಯೇ ಮಂಗಳೂರು. ಮಂಗಳೂರು ನಗರ ವ್ಯಾಪ್ತಿಯನ್ನು ಒಳಗೊಂಡ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಆಡಳಿತ ಹಿಡಿಯಬೇಕೆನ್ನೋದು ಪ್ರತಿಯೊಂದು ಪಕ್ಷಗಳ ಅಭ್ಯರ್ಥಿಗಳ ಮನದಾಸೆ.ಆದರೆ ಅತೀ ಹೆಚ್ಚು ವಿದ್ಯಾವಂತರನ್ನೇ ಒಳಗೊಂಡಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಅಧಿಕಾರದ ಚೆಂಡನ್ನು ಬೇರೆ ಬೇರೆಯವರಿಗೆ ವರ್ಗಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕರು ವೇದವ್ಯಾಸ ಕಾಮತ್. ಕಳೆದ ಬಾರಿ ಕಾಂಗ್ರೆಸ್‌ನ ಜೆ.ಆರ್ ಲೋಬೋ ಅವರಿಗೆ ಮಣೆ ಹಾಕಿದ್ದ ಮಂಗಳೂರಿನ ನಗರವಾಸಿಗಳು, 2018ರ ಚುನಾವಣೆಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರಿಗೆ ಮತ ಚಲಾಯಿಸಿದ್ದರು. ಬಿಜೆಪಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಯನ್ನು ಟ್ರಂಪ್ ಕಾರ್ಡ್ ಆಗಿ ಉಪಯೋಗಿಸಿದರೆ, ಕಾಂಗ್ರೆಸ್ ಕ್ರಿಶ್ಚಿಯನ್ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತಿದೆ.

ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿರುವ ಮಂಗಳೂರು ನಗರದಲ್ಲಿ ಶಾಸಕರೆಷ್ಟು ಸ್ಮಾರ್ಟ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ಈ ಬಾರಿಯ ಚುನಾವಣೆಯ ಒಂದು ಹೈಲೈಟ್ಸ್ ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಭಾವ ಮಂಗಳೂರು ನಗರದ ಜನರ ಮೇಲೆ ಬೀಳುವುದು ನಿಶ್ಚಿತವಾಗಿದೆ.
ಪ್ರಸ್ತುತ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಂಗಳೂರು ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ನಗರದ ರಸ್ತೆಗಳ ಅಗಲೀಕರಣವಾಗಿದೆ. ನಗರದ ಮೂಲೆ ಮೂಲೆಯ ವಾರ್ಡ್‌ಗಳ ಮಣ್ಣಿನ ರಸ್ತೆಗಳಿಗೆ ಕಾಂಕ್ರೀಟ್‌ನ ಹೊದಿಕೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸೌಂದರ್ಯಕರಣಕ್ಕೆ ಆದ್ಯತೆ ನೀಡಲಾಗಿದೆ.
ಮಂಗಳೂರಿನ ಮೀನುಗಾರಿಕಾ ಬಂದರು ವಿಸ್ತರಣೆಯಾಗಿದೆ. ಉದ್ಯೋಗ ಸೃಷ್ಠಿಗೆ ಪ್ರಯತ್ನ-ಬಹುರಾಷ್ಟ್ರೀಯ ಕಂಪನಿಗಳ ಜೊತೆ ಮಾತುಕತೆ ನಡೆಯುತ್ತಿದೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರಿನ ಹಂಪನಕಟ್ಟೆಯಲ್ಲಿ ಪಾರ್ಕಿಂಗ್ ಕಟ್ಟಡ ಕಾಮಗಾರಿಗೆ ಚಾಲನೆ ದೊರಕಿದೆ. ಮಾರುಕಟ್ಟೆಗಳಿಗೆ ಕಾಯಕಲ್ಪ ಲಭ್ಯವಾಗುತ್ತಿದ್ದು,ಸುಸಜ್ಜಿತ ಕಟ್ಟಡಗಳ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿ ಶಾಸಕರ ಅಭಿವೃದ್ಧಿ ಕಾರ್ಯದ ಬಗ್ಗೆ ಬಿಜೆಪಿ ಬೆನ್ನು ತಟ್ಟುತ್ತಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಮೈನಸ್ ಪಾಯಿಂಟ್
ಆದರೆ ನಗರದಲ್ಲಿ ಇನ್ನೂ ಅಭಿವೃದ್ಧಿ ಆಗಬೇಕಾದ ಕಾರ್ಯಗಳು ಬೆಟ್ಟದಷ್ಟಿದೆ ಎನ್ನುವುದು ಕಾಂಗ್ರೆಸ್‌ನ ವಾದವಾಗಿದೆ. ಮಂಗಳೂರು ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಭಾರೀ ವಿಳಂಬವಾಗಿದೆ. ಸ್ಮಾರ್ಟ್ ಸಿಟಿ ಕೆಲಸದಲ್ಲಿ ಸರ್ಕಾರದ ಹಣ ಪೋಲು ಮಾಡಲಾಗಿದೆ. ಯಾವುದೇ ವ್ಯವಸ್ಥಿತ ಯೋಜನೆ ಇಲ್ಲದಿರುವುದು ಸ್ಮಾರ್ಟ್ ಸಿಟಿಯ ಮೈನಸ್ ಪಾಯಿಂಟ್ ಆಗಿದೆ. ಮಂಗಳೂರು ನಗರದಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ ಇದೆ. ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಮೂಲಭೂತ ಸೌಕರ್ಯ ಇಲ್ಲದ ಮಂಗಳೂರು ಮೀನುಗಾರಿಕಾ ಬಂದರು ಶಾಸಕರ ಅಭಿವೃದ್ಧಿಗೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಬಿಜೆಪಿ ಪ್ರಾಭಲ್ಯದ ಮಂಗಳೂರು ದಕ್ಷಿಣ ಕ್ಷೇತ್ರ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಕಾಂಗ್ರೆಸ್-ಬಿಜೆಪಿ ನಡುವೆ ಹಂಚಿಕೆಯಾಗುತ್ತಾ ಬಂದಿದೆ. 1993,1999,2004 ಮತ್ತು 2008ರ ಚುನಾವಣೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿತ್ತು. ನಾಲ್ಕು ಬಾರಿ ಬಿಜೆಪಿಯ ಯೋಗಿಶ್ ಭಟ್ ಜಯ ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ ನ ಜೆ.ಆರ್ ಲೋಬೋ ಗೆಲುವು ಸಾಧಿಸಿದ್ದು, 2018ರಲ್ಲಿ ಬಿಜೆಪಿಯಿಂದ ವೇದವ್ಯಾಸ್ ಕಾಮತ್ ಗೆಲುವು ಕಂಡಿದ್ದರು.
ಬಿಜೆಪಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಬಿಜೆಪಿ ಶಾಸಕ ಸ್ಥಾನಕ್ಕೆ ಅಕಾಂಕ್ಷಿಯಾಗಿ ಈ ಬಾರಿ ಹಾಲಿ ಶಾಸಕ ವೇದವ್ಯಾಸ ಕಾಮತ್ ಅವರ ಹೆಸರು ಪಕ್ಷದ ಕಡೆಯಿಂದ ಬಲವಾಗಿ ಕೇಳಿಬರುತ್ತಿದೆ.ಇತ್ತ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಆರ್ ಲೋಬೋ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವಾನ್ ಡಿಸೋಜಾ, ಮತ್ತು ಬಿಲ್ಲವ ಮುಖಂಡ ಪದ್ಮರಾಜ್ ಕುದ್ರೋಳಿಯವರ ಹೆಸರು ಕೂಡ ಸದ್ದು ಮಾಡುತ್ತಿದೆ.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಒಟ್ಟು ಮತದಾರರು-2,40,057
ಪುರುಷ -1,15,017
ಮಹಿಳೆ -1,25,040
ಜಾತಿ ಲೆಕ್ಕಾಚಾರ (ಅಂದಾಜು)
ಗೌಡ ಸಾರಸ್ವತ ಬ್ರಾಹ್ಮಣ-40,000
ಕ್ರಿಶ್ಚಿಯನ್- 35,000
ಬಂಟ್ಸ್-25,000
ಮುಸ್ಲಿಂ-22,000
ಬಿಲ್ಲವ-23,000
ಪರಿಶಿಷ್ಟ ಜಾತಿ/ಪಂಗಡ-12000
ಮೊಗವೀರ-10,000












Click it and Unblock the Notifications