• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಮುಖಂಡನಿಗೆ ಮಸಿ ಬಳಿದವರಿಗೆ 1 ಲಕ್ಷ ರೂ. ಘೋಷಿಸಿದ್ದ ಹಣವನ್ನು ಬಡಮಕ್ಕಳಿಗೆ ನೀಡಿದ ಪ್ರತಿಭಾ ಕುಳಾಯಿ

|

ಮಂಗಳೂರು, ಫೆಬ್ರವರಿ 15: ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆನ್ನಲಾದ ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ವಿರುದ್ಧ ಬಹಿರಂಗ ಪ್ರತಿಜ್ಞೆ ಹಾಕಿದ್ದಲ್ಲದೆ, ಅವರ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

ಈಗ ಕಾಂಗ್ರೆಸ್‌ ನಾಯಕಿ, ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ಆ 1 ಲಕ್ಷ ರುಪಾಯಿಯನ್ನು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಹಂಚಿದ್ದಾರೆ.

ಶನಿವಾರ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತಿಲ್‌ಗೆ ಆಗಮಿಸಿದ ಅವರು, ಸತ್ಯಧರ್ಮ ಚಾವಡಿಯಲ್ಲಿ ಪ್ರಾರ್ಥನೆ ಮಾಡಿ, ಸ್ಥಳದಲ್ಲೇ 10 ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂ. ನಂತೆ ವಿತರಿಸಿದರು.

ಪುತ್ತೂರು ಆಸುಪಾಸಿನ ಇನ್ನೂ 20 ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೆಜ್ಜೆಗಿರಿ ಮೂಲಕ ಆರಿಸಿಕೊಟ್ಟಲ್ಲಿ ಜಾತಿ ಮತ ಭೇದವಿಲ್ಲದೆ ಅವರ ಶಿಕ್ಷಣ ವೆಚ್ಚ ಭರಿಸುವುದಾಗಿಯೂ ಪ್ರಕಟಿಸಿದರು. ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಜಮಾನರಾದ ಶ್ರೀಧರ ಪೂಜಾರಿ ಅವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿದ ಪ್ರತಿಭಾ ಕುಳಾಯಿ, ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಕಾರಣಿಕದಿಂದಾಗಿ ತಪ್ಪು ಮಾಡಿದ ವ್ಯಕ್ತಿ ಪ್ರಾಯಶ್ಚಿತ್ತ ಪಟ್ಟಿದ್ದಾರೆ.

ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂ. ಬಹುಮಾನ ಘೊಷಣೆ!

ಗರಡಿ ಕ್ಷೇತ್ರಗಳಲ್ಲೇ ತಪ್ಪು ಕಾಣಿಕೆ ಹಾಕಿದ್ದಾರೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ತಾನಾಡಿದ ಮಾತುಗಳನ್ನು ಕೂಡ ಈ ಪುಣ್ಯದ ಮಣ್ಣಿನಲ್ಲಿ ಬಿಟ್ಟು ಬಿಡುತ್ತಿದ್ದೇನೆ. ಅದಕ್ಕಾಗಿ ಮೀಸಲಿಟ್ಟ ಹಣವನ್ನು ಎಲ್ಲ ಜಾತಿ, ಸಮುದಾಯದ 10 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಮಾನವಾಗಿ ಹಂಚುತ್ತಿದ್ದೇನೆ ಎಂದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋಟಿ ಚೆನ್ನಯರು ಮತ್ತು ಬಿಲ್ಲವ ಸಮಾಜದ ಕುರಿತು ಜಗದೀಶ ಅಧಿಕಾರಿ ಅವಹೇಳನಕಾರಿಯಾಗಿ ಮಾತನಾಡಿದಾಗ ತುಂಬಾ ಬೇಸರವಾಯಿತು. ಅಪರಾಧಿಯ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂ. ಬಹುಮಾನ ನೀಡುತ್ತೇನೆಂದು ಘೋಷಿಸಿದ್ದೆ. 3 ದಿನಗಳ ಗಡುವು ಕೊಟ್ಟಿದ್ದೆ. ಎರಡೇ ದಿನದಲ್ಲಿ ಅವರು ಗರಡಿ ಕ್ಷೇತ್ರಗಳಲ್ಲಿ ತಪ್ಪು ಕಾಣಿಕೆ ಹಾಕಿದ್ದಾರೆ. ಹೀಗಾಗಿ ನನ್ನ ಘೋಷಣೆಯನ್ನು ವಾಪಸ್‌ ಪಡೆದಿದ್ದೇನೆ ಎಂದು ಹೇಳಿದರು.

ನಾನು ಜಾತಿವಾದಿಯಲ್ಲ, ನಾರಾಯಣಗುರು ತತ್ವದಲ್ಲಿ ನಂಬಿಕೆ ಇಟ್ಟವಳು. ಜಾತಿ, ಧರ್ಮ, ಕುಲ, ದೇವರ ಹೆಸರಿನಲ್ಲಿ ವಿಷ ಬೀಜ ಬಿತ್ತುವುದರ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಲು ಆ ಮಾತು ಹೇಳಿದ್ದೆ. ಈಗ ಎಲ್ಲ ಸಮಾಜದ ವಿದ್ಯಾರ್ಥಿನಿಯರಿಗೆ ನೆರವು ನೀಡಿದ್ದೇನೆ ಎಂದು ತಿಳಿಸಿದರು.

ಸರ್ವ ಸಮಾಜದ 20 ಬಡ ಮಕ್ಕಳನ್ನು ಗೆಜ್ಜೆಗಿರಿ ಮೂಲಕವೇ ಆರಿಸಿಕೊಟ್ಟಲ್ಲಿ ಅವರ ಶಿಕ್ಷಣದ ವೆಚ್ಚ ಭರಿಸುತ್ತೇನೆ ಎಂದ ಅವರು, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಜಯಂತ ನಡುಬೈಲ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

English summary
Congress leader and former Mahanagara Palike corporator Pratibha Kulai has distributed Rs 1 lakh to poor and talented students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X