18 ವರ್ಷಗಳ ಹಿಂದಿನ ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು
ಮಂಗಳೂರು, ನವೆಂಬರ್.07: 18 ವರ್ಷಗಳ ಹಿಂದೆ ಎಸಗಿದ ಅಪರಾಧ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯ ನಿವಾಸಿ ಬಿ.ಎಮ್.ಹನೀಫ್ ಎಂದು ಗುರುತಿಸಲಾಗಿದೆ.
ಟಾಟಾ ಸುಮೊ ಒಂದನ್ನು ಬಾಡಿಗೆ ಪಡೆದು ಸಕಲೇಶಪುರ, ಹಾಸನ ಇತ್ಯಾದಿ ಕಡೆಗಳಿಗೆ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ ಕೊನೆಗೆ ಆ ಬಾಡಿಗೆ ಕಾರನ್ನು ಕಳವುಗೈದ ಪ್ರಕರಣ ಇದಾಗಿದೆ.
ಬಿ.ಎಮ್. ಹನೀಫ್ ಮತ್ತು ಇನ್ನೊಬ್ಬ ಆರೋಪಿ ಸುಧೀರ್ ಪ್ರಭು ಎಂಬುವವರು 2001, ಮಾರ್ಚ್ 8ರಂದು ಮಂಗಳೂರಿನ ಹಂಪನಕಟ್ಟೆಯಿಂದ ಜಯಂತ ಎಂಬುವವರಿಂದ ಕಾರು ಬಾಡಿಗೆ ಪಡೆದಿದ್ದರು. ಬಳಿಕ ಸಕಲೇಶಪುರ, ಹಾಸನ ಇತ್ಯಾದಿ ಕಡೆಗಳಿಗೆ ಟಿಂಬರ್ ವ್ಯಾಪಾರದ ವಿಚಾರವಾಗಿ ಸುತ್ತಾಡಿ 13ರಂದು ಬೆಳಗಿನ ಜಾವ 03 ಗಂಟೆ ಸುಮಾರಿಗೆ ಪುತ್ತೂರಿನ ಆರಾಧನ ಟೂರಿಸ್ಟ್ ಹೋಂನಲ್ಲಿ ತಂಗಿದ್ದರು.

ಹೋಟೆಲ್ ಹೊರಗೆ ಬಾಡಿಗೆ ಕಾರನ್ನು ಪಾರ್ಕ್ ಮಾಡಲಾಗಿತ್ತು. ಬಳಿಕ ಚಾಲಕ ಇಲ್ಲದ ಸಮಯದಲ್ಲಿ ಈ ಇಬ್ಬರು ಆರೋಪಿಗಳು ಬಾಡಿಗೆ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದರು.
ಆದರೆ ಇತ್ತೀಚೆಗೆ ಈ ಹಳೆ ಆರೋಪಿ ಕುಶಾಲನಗರದಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಶಾಲನಗರದ ಕೂಡಿಗೆಯಲ್ಲಿ ಆರೋಪಿ ಬಿ.ಎಮ್.ಹನೀಫ್ ನನ್ನು ಪತ್ತೆ ಮಾಡಿದ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಇನ್ನು ತಲೆ ಮರೆಸಿಕೊಡಿದ್ದಾನೆ.












Click it and Unblock the Notifications