Mangaluru: ಚಡ್ಡಿ ಗ್ಯಾಂಗ್ ನಾಲ್ವರು ಸದಸ್ಯರ ಬಂಧನ: ಇಬ್ಬರ ಮೇಲೆ ಗುಂಡಿನ ದಾಳಿ
ಮಂಗಳೂರು, ಜುಲೈ 10: ಕಡಲನಗರಿ ಮಂಗಳೂರನ್ನು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ಅನ್ನು ಕೃತ್ಯ ನಡೆದ ಐದೇ ಗಂಟೆಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚಡ್ಡಿ ಗ್ಯಾಂಗ್‌ನ ಖದೀಮರು ನಿನ್ನೆ ಮಂಗಳವಾರ ನಗರದ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ಮಧ್ಯರಾತ್ರಿ ವೃದ್ಧ ದಂಪತಿಗಳಿದ್ದ ಮನೆಯ ಕಿಟಕಿ ಸರಳು ಮುರಿದು ನುಗ್ಗಿ ಕೈ ಸಿಕ್ಕಿರುವುದನ್ನು ದೋಚಿ ಪರಾರಿಯಾಗಿದ್ದರು. ಅಲ್ಲದೇ ವೃದ್ಧ ದಂಪತಿಯಾದ ವಿಕ್ಟರ್ ಮೆಂಡೋನ್ಸಾ(71) ಹಾಗೂ ಪ್ಯಾಟ್ರಿಷಾ ಮೆಂಡೋನ್ಸಾ(60) ಅವರ ಮೇಲೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು.

ಇದೀಗ ಪ್ರಕರಣದ ಆರೋಪಿಗಳಾದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಇವರು ಮಧ್ಯಪ್ರದೇಶದವರು ಎಂಬುದು ತಿಳಿದು ಬಂದಿದೆ.
ಇನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಲಾದ ಚಡ್ಡಿಗ್ಯಾಂಗ್ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಗಳನ್ನು ನಿನ್ನೆ ಸಕಲೇಶಪುರದಲ್ಲಿ ಬಂಧಿಸಿದ ಪೊಲೀಸರು, ಮಂಗಳೂರು ಹೊರವಲಯದ ಮುಲ್ಕಿ ಸಮೀಪ ಮಹಜರಿಗೆ ಸ್ಥಳ ಕರೆದುಕೊಂಡು ಹೋಗಿದ್ದರು. ಈ ವೇಳೆ ಚಡ್ಡಿ ಗ್ಯಾಂಗ್ ಪರಾರಿಯಾಗಲು ಯತ್ನಿಸಿದ್ದು, ಎಎಸ್ಐ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಇಬ್ಬರಿಗೆ ಕಾಲಿಗೆ ಗುಂಡು ತಗುಲಿದ್ದು, ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಡ್ಡಿ ಗ್ಯಾಂಗ್ ಎಂದರೆ ಯಾರು..?
ಈ ಕಳ್ಳರ ಗ್ಯಾಂಗ್ ಕೈ-ಮೈಗೆ ಗ್ರೀಸ್ ಎಣ್ಣೆ ಹಚ್ಚಿ ಕಳ್ಳತನಕ್ಕೆ ಇಳಿಯುತ್ತದೆ. ಕೇವಲ ಚಡ್ಡಿಯಲ್ಲೇ ಬರುವ ತಂಡ ಮೊದಲು ಉಡುಪಿಯ ಸಂತೆ ಕಟ್ಟೆ , ಕಲ್ಯಾಣಪುರ ಭಾಗದಲ್ಲಿ ಕಳ್ಳತನ ನಡೆಸಿದ್ದ ಈ ತಂಡ ಮಂಗಳೂರು ಭಾಗದಲ್ಲಿಯೂ ಆ್ಯಕ್ಟಿವ್ ಆಗಿತ್ತು. ಈ ಗ್ಯಾಂಗ್ ಕಳವು ಮಾಡಿ ಮನೆಯಲ್ಲೇ ಚಪ್ಪಲಿ ಬಿಟ್ಟು ಹೋಗುತ್ತದೆ. ಸಿಸಿಟಿವಿ ಲೆಕ್ಕಿಸದೆ ಮಾಸ್ಕ್ ಧರಿಸಿ ಕೈಚಳಕ ತೋರಿಸುವ ಚೋರರ ವಿಚಿತ್ರ ಕೃತ್ಯ ಜನರನ್ನು ಆತಂಕಕ್ಕೆ ದೂಡಿತ್ತು.
ಈಶಾನ್ಯ ಭಾರತದಲ್ಲಿ ಇಂತಹದೇ ಗ್ಯಾಂಗ್ ಚಾಲ್ತಿಯಲ್ಲಿದೆ. 1990-91ನೇ ಇಸಯಿಯಲ್ಲಿ ಈಶಾನ್ಯ ಭಾರತದಲ್ಲಿ ಪಾತಕ ಕೃತ್ಯಕ್ಕೆ ಈ ಗ್ಯಾಂಗ್ ಹುಟ್ಟಿಕೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಾತಕ ಕೃತ್ಯಗಳನ್ನು ಮಾಡುತ್ತಿದ್ದ ಗ್ಯಾಂಗ್ ಕೊಲೆ, ದರೋಡೆ, ಕಳ್ಳತನ ಮಾಡಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ಡೆಲ್ಲಿ ಕ್ರೈಮ್-2 ವೆಬ್ ಸಿರೀಸ್‌ನಲ್ಲಿ ಈ ಕಚ್ಚಾ ಗ್ಯಾಂಗ್‌ನ ಪಾತಕ ಕೃತ್ಯಗಳನ್ನು ಆಧರಿಸಿ ತೋರಿಸಲಾಗಿದೆ. ಬರೀ ಮೈಲಿ ಬರುವ ತಂಡ ಮೈಯಿಡೀ ಎಣ್ಣೆ ಹಚ್ಚಿಕೊಂಡು ಇರುತ್ತದೆ. ಸೊಂಟಕ್ಕೆ ಎರಡು ಚಪ್ಪಲಿ ಕಟ್ಟಿಕೊಂಡು ಬರುವ ತಂಡ ಕೃತ್ಯ ನಡೆದ ಬಳಿಕ ಒಂದು ಚಪ್ಪಲಿಯನ್ನು ಬಿಟ್ಟು ಪರಾರಿಯಾಗುತ್ತದೆ ಎಂದು ಈ ಹಿಂದೆಯೇ ತಿಳಿದು ಬಂದಿತ್ತು.












Click it and Unblock the Notifications