ಕಾಂತಾರ ಸಿನಿಮಾ ವೀಕ್ಷಿಸಿದ ವೀರೇಂದ್ರ ಹೆಗ್ಗಡೆ: ಚಿತ್ರಕ್ಕೆ ಭಾರಿ ಮೆಚ್ಚುಗೆ
ಮಂಗಳೂರು, ಅಕ್ಟೋಬರ್ 22: ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು. ಚಿತ್ರ ವಿಭಿನ್ನವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ರಿಷಬ್ ಶೆಟ್ಟಿ, ರಚಿಸಿ, ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ನೋಡದ ಜನ ಇಲ್ಲ ಅನ್ನುವಂತಾಗಿದೆ. ಸಿನಿಮಾ ಅಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತಿದೆ.
ಹೀಗಾಗಿ ಶುಕ್ರವಾರ ರಾತ್ರಿ ಮಂಗಳೂರಿನ ಭಾರತ್ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು.

ವೀರೇಂದ್ರ ಹೆಗ್ಗಡೆ ಕುಟುಂಬಸ್ಥರಿಂದ ಕಾಂತಾರಕ್ಕೆ ಮೆಚ್ಚುಗೆ
ಸಿನಿಮಾ ವೀಕ್ಷಣೆ ಬಳಿಕ ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಚಿತ್ರವನ್ನು ಹಾಗೂ ಚಿತ್ರ ತಂಡವನ್ನು ಹಾಡಿ ಹೊಗಳಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ವೀರೇಂದ್ರ ಹೆಗ್ಗಡೆ ಅವರ ಪತ್ನಿ ಡಾ.ಹೇಮಾವತಿ ಹೆಗ್ಗಡೆ, ಮೊಮ್ಮಗಳು ಮಾನ್ಯ ಸೇರಿದಂತೆ ಕುಟುಂಬಸ್ಥರೊಂದಿಗೆ ಡಾ.ಡಿ ವೀರೇಂದ್ರ ಹೆಗ್ಗಡೆ ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂತಾರಾ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಯುವಕರಿಗೆ ಹೊಸ ಕಥೆ , ಹಳೆಯ ಸ್ಮರಣೆ ಕಾಂತಾರ
"ಇತ್ತೀಚಿನ ದಿನಗಳಲ್ಲಿ ಸಿನಿಮಾನೋಡದೆ ಬಹಳ ದಿನವಾಗಿತ್ತು. ಕಾಂತಾರದಲ್ಲಿ ದೈವಾರಾಧನೆಯನ್ನು ಬಹಳ ಚೆನ್ನಾಗಿ ರಿಷಬ್ ಶೆಟ್ಟಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ಹೊಸ ಕಥೆ , ಹಳೆಯ ಸ್ಮರಣೆ ಆಗುತ್ತದೆ.ಈ ಚಿತ್ರದಲ್ಲಿ ಹೊಸ ದೃಷ್ಠಿಕೋನವಿದೆ. ಜಾತಿ ಮತ ಬೇಧ ಮರೆತು ಸಹಬಾಳ್ವೆ ಮಾಡಬೇಕೆಂಬ ಸಂದೇಶ ಈ ಚಿತ್ರದಲ್ಲಿ ಇದೆ. ಕಾಂತಾರಾ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಮೂಡ್ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಕಲಾವಿದರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ," ಎಂದು ಚಿತ್ರದ ಬಗ್ಗೆ ವಿರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೈವಾರಾಧನೆ ಅಧರ್ಮಕ್ಕೆ ಬೆಂಬಲ ಕೊಡುವುದಿಲ್ಲ
ಕಾಂತಾರ ಚಿತ್ರದ ಬಗ್ಗೆ ಮಾತು ಮುಂದುವರಿಸಿದ ಅವರು, "ಬೆಳೆಯುತ್ತಿರುವ ತಂತ್ರಜ್ಞಾನವನ್ನು ರಿಷಬ್ ಶೆಟ್ಟಿ ಹೇಗೆ ಬಳಸಿಕೊಂಡಿದ್ದಾರೆ ಎನ್ನುವುದನ್ನು ಚಿತ್ರದಲ್ಲಿ ನೋಡಿದ್ದೇನೆ. ಕಲಾವಿದರು, ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೈವಾರಾಧನೆಯ ನಂಬಿಕೆ, ಯಾವತ್ತೂ ಅಧರ್ಮಕ್ಕೆ ಬೆಂಬಲ ಕೊಡುವುದಿಲ್ಲ. ಸಮಾಜದಲ್ಲಿ ಸ್ವಾರ್ಥ,ಹಣ ವಶೀಕರಣ ಪ್ರಯತ್ನ ನಡೆಯುತ್ತದೆ. ಆದರೆ ದೈವಗಳು ಸತ್ಯಕ್ಕೆ ಮಾತ್ರ ಬೆಲೆ ಕೊಡುತ್ತದೆ ಎನ್ನುವುದು ಚಿತ್ರದಲ್ಲೂ ಮೂಡಿ ಬಂದಿದೆ," ಎಂದು ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದರು.

ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದೋ ಅಲ್ಲವೋ ಗೊತ್ತಿಲ್ಲ
ಇನ್ನು ಇದೇ ಸಂಧರ್ಭದಲ್ಲಿ ದೈವಾರಾಧನೆ ಬಗ್ಗೆ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದೋ ಅಲ್ಲವೋ ಅನ್ನೋದು ಗೊತ್ತಿಲ್ಲ. ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವವನ್ನು ಅರಿಯದೆ ಮಾತನಾಡಿದರೆ ಬೇರೆಯಾಗುತ್ತದೆ. ಧರ್ಮದ ಮೂಲ ಹುಡುಕುತ್ತಾ ಹೋದರೆ ಎಲ್ಲಿಯೂ ಸಿಗುವುದಿಲ್ಲ. ನಂಬಿಕೆ ಆಚರಣೆ ನಡವಳಿಕೆ ಸ್ವಭಾವಿಕವಾಗಿ ಬೆಳೆದು ಬಂದಿದೆ. ಇದನ್ನು ನಾವು ಬಿಟ್ಟಿರೋಕೆ ಸಾಧ್ಯವೇ ಇಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆಯನ್ನು ಹೋಗಿ ನೋಡಿದ್ದಾರೆ ಅನ್ನೋದು ಗೊತ್ತಿಲ್ಲ. ದೈವಾರಾಧನೆಗೆ ಎರಡು ಜಿಲ್ಲೆಯಲ್ಲಿ ವ್ಯಾಪಕವಾದ ನಂಬಿಕೆಯಿದೆ. ಇವತ್ತೂ ದೈವಾರಾಧನೆ ಮಾಡುತ್ತೇವೆ, ದೈವದ ನುಡಿಗೆ ಗೌರವ ಕೊಡುತ್ತೇವೆ, ದೈವ ಮೈಮೇಲೆ ಬಂದಾಗ ಮಾತಿಗೆ ಗೌರವ ಕೊಡುತ್ತೇವೆ. ಇದನ್ನು ಧರ್ಮಕ್ಕೆ, ಸೂಕ್ಷ್ಮಕ್ಕೆ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ ಎಂದರು.












Click it and Unblock the Notifications