ಕದ್ರಿ ಮಾತ್ರವಲ್ಲ..ಉಡುಪಿ ಮಠ, ಬಿಜೆಪಿ ಕಚೇರಿ ಸ್ಫೋಟಕ್ಕೆ ಪ್ಲಾನ್: ಎನ್‌ಐಎ ತನಿಖೆಯಲ್ಲಿ ಹೊರಬಿತ್ತು ಟಾರ್ಗೆಟ್ ಲಿಸ್ಟ್
ಬೆಂಗಳೂರು, ಅಕ್ಟೋಬರ್ 18: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯಿಂದ ಉಗ್ರಗಾಮಿ ಸಂಘಟನೆಯ ಸಂಚುಕೋರರ ಒಂದೊಂದೇ ಭಯಾನಕ ಪ್ಲಾನ್‌ಗಳು ಹೊರ ಬೀಳುತ್ತಿದ್ದು, ಉಡುಪಿಯ ಶ್ರೀ ಕೃಷ್ಣ ಮಠವು ಕೂಡ ಶಂಕಿತ ಉಗ್ರರ ಟಾರ್ಗೆಟ್ ಆಗಿತ್ತು ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ಸಂಚು ರೂಪಿಸಿದ್ದ ಉಗ್ರಗಾಮಿ ಸಂಘಟನೆಯ ಸಂಚುಕೋರ, ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಲಾಗಿತ್ತು ಎನ್ನುವ ಅಂಶ ಹೊರಬಿದ್ದಿದೆ.

ಮಂಗಳೂರಿನ ಕದ್ರಿ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಜೊತೆಗೆ ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನೂ ಕೂಡ ಟಾರ್ಗೆಟ್ ಮಾಡಲಾಗಿತ್ತು ಎಂದು ಅರಾಫತ್ ಅಲಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಮಂಗಳೂರಿನ ಕದ್ರಿ ಬ್ಲಾಸ್ಟ್ ಯಶಸ್ವಿಯಾದರೆ ಉಡುಪಿ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿಯನ್ನು ಬ್ಲಾಸ್ಟ್ ಮಾಡಲು ಶಂಕಿತ ಉಗ್ರರರು ಸಂಚು ರೂಪಿಸಿದ್ದರು. ಆದರೆ ಕದ್ರಿ ದೇವಸ್ಥಾನ ತಲುಪುವ ಮುನ್ನವೇ ಕುಕ್ಕರ್ ಬಾಂಬ್ ಸ್ಟೋಟಗೊಂಡು ಆರೋಪಿ ಪೊಲೀಸರ ಕೈಗೆ ಸಿಕ್ಕಿದ್ದ. ಹೀಗಾಗಿ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಯೋಜನೆ ವಿಫಲಗೊಂಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಅರಾಫತ್ ಅಲಿ ವಿಚಾರಣೆ ಬಳಿಕ ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆಯ ಹಿನ್ನೆಲೆ ಏನು..?
2022 ನವೆಂಬರ್ 19ರಂದು ಮಂಗಳೂರು ನಗರದ ನಾಗುರಿಯ ಗರೋಡಿ ಬಳಿ ಸಂಚಾರದಲ್ಲಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಪಡೀಲ್‌ನಲ್ಲಿ ರಿಕ್ಷಾ ಹತ್ತಿದ್ದ ಶಂಕಿತ ಉಗ್ರ ಶಾರೀಕ್ ಬಳಿಯಿದ್ದ ಕುಕ್ಕರ್ ಬಾಂಬ್ ನಾಗುರಿ ಬಳಿ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಇದರಿಂದ ಶಾರೀಕ್ ಹಾಗೂ ರಿಕ್ಷಾ ಚಾಲಕ ಗಾಯಗೊಂಡಿದ್ದರು.
ಈ ಇಬ್ಬರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಿಕ್ಷಾ ಚಾಲಕ ಗುಣಮುಖರಾಗಿ ಮನೆಗೆ ಮರಳಿದ್ದರೆ, ಶಾರೀಕ್‌ನನ್ನು ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು. ಬಳಿಕ ಪ್ರಕರಣ ಸಂಬಂಧ ಶಿವಮೊಗ್ಗದ ಅರಾಫತ್ ಅಲಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.
ಚಿಕ್ಕಮಗಳೂರು ಬಿಜೆಪಿ ಕಚೇರಿ ಟಾರ್ಗೆಟ್: ಸಿ.ಟಿ ರವಿ ಹೇಳಿದ್ದೇನು..?
ಇನ್ನು ಶಂಕಿತ ಉಗ್ರರು ಚಿಕ್ಕಮಗಳೂರು ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿರುವ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ "ಯಾರು ರಾಷ್ಟ್ರ ಭಕ್ತರಾಗಿ ಕೆಲಸ ಮಾಡುತ್ತಾರೆ. ಅವರೇ ಇವರಿಗೆ ಟಾರ್ಗೆಟ್. ಇವರ ಅಜೆಂಡಾ ಏನೂ ಹೊಸದೆನ್ನಲ್ಲ. ಘೋರಿ, ಬಾಬರ್, ಟಿಪ್ಪು, ಔರಂಗಜೇಬ್ ಇವರ ಅಜೆಂಡಾವನ್ನು ಇವರು ಮುಂದುವರೆಸುತ್ತಿರುವುದು. ಈ ದೇಶವನ್ನು ಇಸ್ಲಾಂ ಮಯ ಮಾಡುವುದು ಅವರ ಅಜೆಂಡಾ ಇತ್ತು. ಇವರ ಅಜೆಂಡಾ ಕೂಡ ಅದೇ ವ್ಯತಾಸವೆನ್ನಿಲ್ಲ" ಎಂದರು.
ಇನ್ನು "ಗುರುಗೋವಿಂದ ಸಿಂಹ, ಪೃಥ್ವಿ ರಾಜಚೌಹಣ್, ರಾಣಾ ಪ್ರತಾಪ್ ಇಂತಹವರೆಲ್ಲ ಶತ್ರುಗಳಾಗಿ ಕಾಣುತ್ತಿದ್ದರು. ಶಿವಾಜಿ, ಮೈಸೂರು ಒಡೆಯ ಮನೆತನ ಶತ್ರುಗಳಾಗಿ ಕಾಣುತ್ತಿದ್ದರು. ಈಗ ಇವರಿಗೆ ಬಿಜೆಪಿ, ಆರ್‌ಎಸ್‌ಎಸ್ ಪ್ರಜಾಪ್ರಭುತ್ವ ಇರುವುದರಿಂದ ಸಂಘಟನೆಗಳು ಶತ್ರುಗಳಾಗಿ ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications