ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಬಾಂಬ್‌': ಪೊಲೀಸ್ ಕಮಿಷನರ್ ಹರ್ಷಗೆ 6 ಪ್ರಶ್ನೆಗಳು..

|
Google Oneindia Kannada News

ಬೆಂಗಳೂರು, ಜ. 22: ಕೊನೆಗೂ ಸೋಮವಾರ ಬೆಳಗ್ಗೆ 11 ಗಂಟೆಯಿಂದ ರಾಜ್ಯದಲ್ಲಿ ಸೃಷ್ಟಿಯಾದ ಆತಂಕದ ವಾತಾವರಣ ತಿಳಿಗೊಳ್ಳುವ ಮುನ್ಸೂಚನೆ ಸಿಕ್ಕಿದೆ. 48 ಗಂಟೆಗಳ ಅಂತರದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಇಟ್ಟು ಬೆದರಿಕೆ ಒಡ್ಡಿದ್ದ ಆರೋಪಿ ಆದಿತ್ಯ ರಾವ್ ಬುಧವಾರ (ಜ 22) ಬೆಳಗ್ಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗಿದ್ದಾನೆ.

ಈ ಮೂಲಕ ಹಲವು ಅಂತೆಕಂತೆಗಳಿಗೆ, ವಿನಾಕಾರಣದ ಪೂರ್ವಾಗ್ರಹ ಪೀಡಿತ ಅನುಮಾನಗಳಿಗೆ ತೆರೆ ಬಿದ್ದಂತಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್, ಅದರ ಸುತ್ತ ಬೆಳೆದು ಬಂದ ನಿರಂತರ ಪ್ರಚಾರ, ಮಂಗಳೂರು ಪೊಲೀಸರು ನಡೆದುಕೊಂಡ ರೀತಿಯ ಸುತ್ತ ಹಲವು ಪ್ರಶ್ನೆಗಳು ಏಳುವುದು ಸಹಜ ಮತ್ತು ಅವುಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಕಮಿಷನರ್ ಹರ್ಷಗೆ ಒಂದಷ್ಟು ಪ್ರಶ್ನೆಗಳು. ಮುಂದೆ ಓದಿ..

1. ಬಾಂಬ್ ಪತ್ತೆ, ಟೇಕ್‌ ಆಫ್‌' ಆದ ಪ್ರಾಪಗಂಡಾ: ಅದು ಸೋಮವಾರ, ವಾರದ ಆರಂಭದ ದಿನ. ಬೆಳಗ್ಗೆ 10 ಗಂಟೆ 50 ನಿಮಿಷಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾಗಿದೆ ಎಂಬ ಮಾಹಿತಿ ಹೊರಬಿತ್ತು. ಇದು ಐಇಡಿ ಬಾಂಬ್ (ಇಂಪ್ರೂವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್) ಎಂದು ಆರಂಭದಲ್ಲಿಯೇ ಪ್ರಚಾರ ಪಡೆದುಕೊಂಡಿತು.

ಬಾಂಬ್ ಬೆದರಿಕೆ: ಇಂದು ಆದಿತ್ಯ ರಾವ್- ಅಂದು ಮಟ್ಟಣ್ಣನವರ್!ಬಾಂಬ್ ಬೆದರಿಕೆ: ಇಂದು ಆದಿತ್ಯ ರಾವ್- ಅಂದು ಮಟ್ಟಣ್ಣನವರ್!

10 ಕೆಜಿಯ ಬಾಂಬ್ ಇದಾಗಿದ್ದು ಅರ್ಧ ಕಿಮೀ ಪ್ರದೇಶವನ್ನು ಅಪೋಶನ ತೆಗೆದುಕೊಳ್ಳುವಷ್ಟು ಪ್ರಬಲವಾಗಿರುತ್ತದೆ ಎಂದು ಹೇಳಲಾಯಿತು. ಸಹಜವಾಗಿಯೇ ಇದು ಆತಂಕವನ್ನು ಇಮ್ಮಡಿಗೊಳಿಸಿತು. ಸಾಮಾನ್ಯವಾಗಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೂ ಕೇಂದ್ರ ಕೈಗಾರಿಕಾ ಸುರಕ್ಷತಾ ಪಡೆ (ಸಿಐಎಸ್‌ಎಫ್‌) ಭದ್ರತೆ ಒದಗಿಸುತ್ತದೆ. ಇವರನ್ನು ಭೇದಿಸಿ ಐಇಡಿ ವಿಮಾನ ನಿಲ್ದಾಣದ ಕೌಂಟರ್‌ವರೆಗೆ ಬಂದಿದ್ದಾದರೂ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ. ಬದಲಿಗೆ ಬಾಂಬ್ ಸುತ್ತ ಭಯ ಹುಟ್ಟಹಾಕುವ ವ್ಯವಸ್ಥಿತ ಪ್ರಾಪಗಂಡಾ ಮಾತ್ರವೇ ಟೇಕ್‌ ಆಫ್‌ ಆಯಿತು. ಮುಂದೆ ಓದಿ..

 ಸ್ಥಳಕ್ಕೆ ಬಂದವರು ಕಮಿಷನರ್ ಹರ್ಷ

ಸ್ಥಳಕ್ಕೆ ಬಂದವರು ಕಮಿಷನರ್ ಹರ್ಷ

2. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದ್ದು ಬೆಳಗ್ಗೆ 10 ಗಂಟೆ 50 ನಿಮಿಷಗಳಿಗೆ. ವಿಶೇಷ ಅಂದರೆ ಆಯುಕ್ತ ಪಿ,ಎಸ್. ಹರ್ಷ ಸ್ಥಳಕ್ಕೆ ಭೇಟಿ ನೀಡಿದ್ದು 11 ಗಂಟೆಗೆ. ಮಾಧ್ಯಮಗಳಲ್ಲಿ ಪ್ರಸಾರವಾದ ಈ ಟೈಮ್‌ಲೈನ್‌ ನೋಡಿದರೆ ಅನುಮಾನವೊಂದು ಸಹಜವಾಗಿ ಹುಟ್ಟಿಕೊಳ್ಳುತ್ತದೆ.

ಯಾಕೆಂದರೆ, ಮಂಗಳೂರು ಕಮಿಷನರ್ ಕಚೇರಿಯಿಂದ ವಿಮಾನ ನಿಲ್ದಾಣ ಸುಮಾರು 6 ಕಿಮೀ ದೂರದಲ್ಲಿದೆ. ಅದು ಬೆಳಗ್ಗಿನ ಟ್ರಾಫಿಕ್ ದಾಟಿಕೊಂಡು ಕಮಿಷನರ್ ಕೇವಲ 10 ನಿಮಿಷಗಳಲ್ಲಿ ಘಟನಾ ಸ್ಥಳವನ್ನು ಹೇಗೆ ತಲುಪುತ್ತಾರೆ? ಇದು ಪ್ರಕರಣದಲ್ಲಿ ಕಾಣಿಸುವ ಮೊದಲ ಮಿಸ್ಸಿಂಗ್ ಲಿಂಕ್.

 ಪ್ರಕ್ರಿಯೆಗಳು ನಡೆಯಲೇ ಇಲ್ಲ!

ಪ್ರಕ್ರಿಯೆಗಳು ನಡೆಯಲೇ ಇಲ್ಲ!

3. ಇನ್ನು ಕಮಿಷನರ್ ಸ್ಥಳಕ್ಕೆ ಬಂದ ಮೇಲಾದರೂ ಬಾಂಬ್ ಸುತ್ತ ನಡೆಯಬೇಕಿರುವ ಪ್ರಕ್ರಿಯೆಗಳು ಸರಿಯಾಗಿ ನಡೆದಿದೆಯಾ ಎಂದು ನೋಡಿದರೂ, ಅಲ್ಲೂ ಕೆಲವು ಅನುಮಾನಗಳು ಹುಟ್ಟುತ್ತದೆ. 11.15ಕ್ಕೆಲ್ಲಾ ಸ್ಥಳಕ್ಕೆ ಐಸೋಲೇಷನ್ ಬೇ ವೆಹಿಕಲ್ (ಟಿವಿಗಳಲ್ಲಿ ಬಂದ ಹಾಗೆ ಇದು ಇದು ಬಾಂಬ್ ಡಿಸ್ಪೋಸಿಂಗ್ ಮೆಷಿನ್ ಅಲ್ಲ) ಸ್ಥಳಕ್ಕೆ ಬರುತ್ತದೆ.

ಸಾಮಾನ್ಯವಾಗಿ ಎಲ್ಲಿಯೇ ಬಾಂಬ್ ಪತ್ತೆಯಾದರೂ ಮೊದಲು ಅದರ ಮೇಲೆ ಮೂಡಿರಬಹುದಾದ ಬೆರಳಚ್ಚುಗಳನ್ನು ಪತ್ತೆ ಸಂಗ್ರಹಣ, ತಪಾಸಣೆಗೆ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಅದು ನಿಯಮ ಕೂಡ. ಆದರೆ ಈ ಪ್ರಕರಣದಲ್ಲಿ ಅಂತಹ ಯಾವುದೇ ಪ್ರಕ್ರಿಯೆ ನಡೆಯುವುದೇ ಇಲ್ಲ. ಬದಲಿಗೆ, ಟಿವಿ ಕ್ಯಾಮೆರಾಗಳ ಸಾಕ್ಷಿಯಲ್ಲಿ ಅದನ್ನು ಕೆಂಜಾರು ಬಯಲು ಪ್ರದೇಶಕ್ಕೆ ಒಯ್ಯಲಾಗುತ್ತದೆ.

 ಶಂಕಿತ ಚಿತ್ರ ಬಿಡಿಗಡೆಗೆ ಆತುರ

ಶಂಕಿತ ಚಿತ್ರ ಬಿಡಿಗಡೆಗೆ ಆತುರ

4. ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗುತ್ತಿದ್ದಂತೆ ಕಮಿಷನರ್ ಸ್ಥಳಕ್ಕೆ ಬರುತ್ತಾರೆ ಮತ್ತು ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂದೇಶ ರವಾನಿಸುತ್ತಾರೆ. ಆದರೆ ಅಷ್ಟೇ ವೇಗವಾಗಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗುತ್ತವೆ. ಈ ಮೂಲಕ ಶಂಕಿತನ ಕುರಿತು ಮಾಹಿತಿ ರವಾನೆಯಾಗುತ್ತದೆ.

ತನಿಖಾ ತಂಡಗಳು ಶಂಕಿತರ ಚಹರೆ ಗೌಪ್ಯವಾಗಿಟ್ಟು ಅವರನ್ನು ಗಮನಿಸುವ, ಹಿಂಬಾಲಿಸುವ ಕೆಲಸ ಮಾಡುತ್ತವೆ. ಆದರೆ ಮಂಗಳೂರು ಪೊಲೀಸರು ಯಾಕೆ ತನಿಖೆಯಲ್ಲಿ ಈ ಮಾದರಿಯನ್ನು ಅನುಸರಿಸುವುದಿಲ್ಲ? ಸಿಸಿಟಿವಿ ಬಿಡುಗಡೆ ಮಾಡುವ ಮೂಲಕ ಮಾಧ್ಯಮ ಕೇಂದ್ರಿತ ತನಿಖೆಗೆ ಅವರೇಕೆ ಸಹಾಯ ಮಾಡಿದರು? ಇದು ಪ್ರಕರಣದಲ್ಲಿ ಹುಟ್ಟುವ ಮತ್ತೊಂದು ಪ್ರಮುಖ ಪ್ರಶ್ನೆ.

ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?

 ಕಾಗಕ್ಕನ ಕತೆಗಳಿಗೆ ಇಲ್ಲದ ಬ್ರೇಕ್

ಕಾಗಕ್ಕನ ಕತೆಗಳಿಗೆ ಇಲ್ಲದ ಬ್ರೇಕ್

5. ಒಂದು ಕಡೆ ಶಂಕಿತ ಚಿತ್ರ ಹಾಗೂ ಭಾರಿ ಗ್ರಾತ್ರದ ಬಾಂಬ್ ಎಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿದ್ದರೆ ಮಂಗಳೂರು ಪೊಲೀಸರಿಗೆ ಇದು ಕಚ್ಚಾ ಬಾಂಬ್ ಎಂಬುದು ಆರಂಭದಲ್ಲಿಯೇ ಅರ್ಥವಾಗಿ ಹೋಗಿತ್ತು. ಮಂಗಳೂರು ಸಿಸಿಬಿ ಮೂಲಗಳು ನೀಡುವ ಮಾಹಿತಿ ಪ್ರಕಾರ, "ಮೊದಲ ದಿನವೇ ಇದು ಕಚ್ಚಾ ಬಾಂಬ್, ರಂಜಕದ ಹೊರತಾಗಿ ಇನ್ನೇನು ಇಲ್ಲ ಎಂಬುದು ಗೊತ್ತಾಗಿತ್ತು.

ಅದರಲ್ಲೂ ಕೃತಕ ಸ್ಫೋಟದ ನಂತರ ಎಫ್‌ಎಸ್‌ಎಲ್ ತಜ್ಞರು ಪ್ರಾಥಮಿಕ ಹಂತದಲ್ಲಿಯೇ ಈ ಕುರಿತು ಕ್ಲಾರಿಟಿ ನೀಡಿದ್ದರು." ಆದರೆ ಬಾಂಬ್ ಸುತ್ತ ಆತಂಕ ಸೃಷ್ಟಿಯಾಗಿರುವುದನ್ನು ತಡೆಯುವ ಪ್ರಯತ್ನ ಮಾತ್ರ ಮಂಗಳೂರು ಪೊಲೀಸರ ಕಡೆಯಿಂದ ನಡೆಯುವುದಿಲ್ಲ. ಉಳಿದ ವಿಚಾರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಕೊಂಡ ಅವರು ಯಾಕೆ ಅತ್ಯಂತ ಅಗತ್ಯವಾಗಿರುವ ಈ ಮಾಹಿತಿಯನ್ನು ಸೋರಿಕೆ ಮಾಡಲಿಲ್ಲ?

 ಪೊಲೀಸರು ನಂಬಿಕೆ ಕಳೆದುಕೊಳ್ಳಬಾರದು

ಪೊಲೀಸರು ನಂಬಿಕೆ ಕಳೆದುಕೊಳ್ಳಬಾರದು

6. ಮಂಗಳೂರು ಡಿ. 19ರಂದು ನಡೆದ ಗೋಲಿಬಾರ್‌ನಿಂದ ಮಂಗಳೂರು ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ಪಬ್ಲಿಕ್ ಟ್ರಿಬ್ಯೂನಲ್ ನೀಡಿದ ವರದಿ ಮಂಗಳೂರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದೆ. ಇಂತಹ ಸಮಯದಲ್ಲಿ ಬಾಂಬ್ ಬೆದರಿಕೆಯಂತಹ ಅತ್ಯಂತ ಸೂಕ್ಷ್ಮ ಪ್ರಕರಣದಲ್ಲಿ ಮಾಧ್ಯಮಗಳ ಕಟಕಟೆಯಲ್ಲಿಯೇ ನ್ಯಾಯ ಒದಗಿಸಲು ಮಂಗಳೂರು ಪೊಲೀಸ್ ಕಮಿಷನರ್ ಹರ್ಷ ಮುಂದಾಗಿರುವುದು ಇಲಾಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ ಮತ್ತು ಮೇಲಿನ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದೆ. ಓವರ್ ಟು ಕಮಿಷನರ್ ಹರ್ಷ..

English summary
Mangaluru Bomb Incident: Six Questions City Police Commissioner IPS Harsha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X