ಮಂಗಳೂರು ಬಂದ್ : ಸಂಚಾರ ಅಸ್ತವ್ಯಸ್ಥ, ಚಿತ್ರಗಳು
ಮಂಗಳೂರು, ನವೆಂಬರ್ 13 : ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕರೆ ನೀಡಿರುವ ಶುಕ್ರವಾರದ ಮಂಗಳೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.
ಗುರುವಾರ ರಾತ್ರಿ ಬಂಟ್ವಾಳದಲ್ಲಿ ಯುವಕರಿಬ್ಬರ ಮೇಲೆ ದಾಳಿ ನಡೆಸಿದ ಅಪರಿಚಿತ ತಂಡವೊಂದು ಚೂರಿಯಿಂದ ಇರಿದು ಒಬ್ಬನನ್ನು ಹತ್ಯೆ ಮಾಡಿದೆ. ಈ ಘಟನೆಯನ್ನು ಖಂಡಿಸಿ ಮತ್ತು ಮಡಿಕೇರಿಯಲ್ಲಿ ವಿಎಚ್‌ಪಿ ಮುಖಂಡ ಕುಟ್ಟಪ್ಪ ಹತ್ಯೆ ಖಂಡಿಸಿ ಬಂದ್ ಕರೆ ನೀಡಲಾಗಿದೆ. [ಬಂಟ್ವಾಳದಲ್ಲಿ ಯುವಕನ ಹತ್ಯೆ, ಇಂದು ಮಂಗಳೂರು ಬಂದ್]

ಮಂಗಳೂರು ಬಂದ್ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಮೂರು ದಿನಗಳ ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
* ಮಂಗಳೂರು, ಸುರತ್ಕಲ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ಥಗಿತಗೊಂಡಿದೆ. ಮಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

* ಉಡುಪಿ ಜಿಲ್ಲೆಯಲ್ಲಿ ಬಂದ್ ಆಚರಣೆ ಮಾಡುತ್ತಿಲ್ಲ. ಕಟಪಾಡಿಯಲ್ಲಿ ಹೆದ್ದಾರಿ ತಡೆಯಲಾಗಿದೆ. ತುಂಬೆ ಶಾಲೆಯ ಬಳಿ ಹಾಗೂ ಕಡೆಗೋಳಿಯಲ್ಲಿ ದುಷ್ಕರ್ಮಿಗಳು ವಾಹನಗಳ ಮೇಳೆ ಕಲ್ಲು ತೂರಾಟ ನಡೆಸಿದ್ದಾರೆ.
* ಗುರುವಾರ ಹರೀಶ್ ಹತ್ಯೆ ನಡೆದ ಬಂಟ್ವಾಳದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಂದ್ ಬಿಸಿಯಿಂದಾಗಿ ಉಡುಪಿ-ಮಂಗಳೂರು ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ.

* ಬಂದ್ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಪಿಲಿಕುಳದಲ್ಲಿ ನಿಗದಿಯಾಗಿದ್ದ ಮಕ್ಕಳ ಹಬ್ಬವನ್ನು ಮುಂದೂಡಲಾಗಿದೆ.
* ಬಸ್ಸುಗಳ ಸಂಚಾರವಿಲ್ಲದ ಕಾರಣ ಪ್ರಯಾಣಿಕರು ರೈಲಿನ ಮೊರೆ ಹೋಗಿದ್ದು, ಮಂಗಳೂರು ರೈಲು ನಿಲ್ದಾಣ ತುಂಬಿದೆ.

* ಬಿ.ಸಿ.ರೋಡಿನಲ್ಲಿ ಬೆಳಗ್ಗೆ ಬೆಂಗಳೂರಿಗೆ ಸಂಚರಿಸುತ್ತಿದ್ದ ಬಸ್ಸಿಗೆ ಕಲ್ಲು ತೂರಲಾಗಿದೆ. ವಾಹನ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ.












Click it and Unblock the Notifications