ಫ್ಯಾನಿನೊಳಗೆ ಸಿಕ್ತು 45 ಲಕ್ಷ ಮೌಲ್ಯದ ಚಿನ್ನ
ಮಂಗಳೂರು, ಸೆ.26 : ಕೆಲವು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಟಿವಿಯೊಳಗೆ ಚಿನ್ನತಂದು ಒಬ್ಬ ಸಿಕ್ಕಿಹಾಕಿಕೊಂಡಿದ್ದ. ಬುಧವಾರ ಫ್ಯಾನಿನೊಳಗೆ 45.55 ಲಕ್ಷ ಮೌಲ್ಯದ ಚಿನ್ನವನ್ನು ತಂದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.
ದುಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಅಬ್ದುಲ್ ರಹಿಮಾನ್ ಮಲಂಗಳ (29) ಚಿನ್ನ ಸಾಗಿಸುವಾಗ ಬುಧವಾರ ವಿಮಾನ ನಿಲ್ದಾಣದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಬ್ದುಲ್ ಮೂಲತಃ ಕಾಸರಗೋಡಿನ ಹಿದಾಯತ್ ನಗರದವರು ಎಂದು ತಿಳಿದುಬಂದಿದೆ.

ವ್ಯಕ್ತಿಯೊಬ್ಬರು ಚಿನ್ನ ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ದುಬೈನಿಂದ ಮಂಗಳೂರಿಗೆ ಬೆಳಗ್ಗೆ 8.30ಕ್ಕೆ ಆಗಮಿಸಿದ ಜೆಟ್ ಏರ್ ವೇಸ್ ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅಬ್ದುಲ್ ಫ್ಯಾನಿನೊಂದಿಗೆ ಸಿಕ್ಕಿಹಾಕಿಕೊಂಡಿದ್ದಾನೆ. 24 ಕ್ಯಾರೆಟ್ ಶುದ್ಧ ಚಿನ್ನದ 6 ಬಾರ್ ಗಳನ್ನು ಹುದುಗಿಸಿ ಲಗೇಜ್ ಬಾಕ್ಸ್‌ನಲ್ಲಿ ಇಡಲಾಗಿತ್ತು. ಒಟ್ಟು 1,499.45 ಗ್ರಾಂ ಚಿನ್ನವನ್ನು ಅಬ್ದುಲ್ ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಬ್ದುಲ್ ಸಾಗಿಸುತ್ತಿದ್ದ ಚಿನ್ನದ ಮೌಲ್ಯ 45.55 ಲಕ್ಷ ಎಂದು ಅಧಿಕಾರಿಗಳು ಲೆಕ್ಕಹಾಕಿದ್ದಾರೆ. ಅಬ್ದುಲ್ ಅವರನ್ನು ಬಂದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಮಂಗಳೂರು : ಟಿವಿವೊಳಗೆ ಚಿನ್ನದ ಬಿಸ್ಕತ್ ತಂದು ಸಿಕ್ಕಿಬಿದ್ದ)
ಕೆಲವು ದಿನಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಟಿವಿಯೊಳಗೆ ಚಿನ್ನದ ಬಿಸ್ಕೆಟ್ ಗಳನ್ನು ಸಾಗಿಸುವಾಗ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುವುದು ಹೊಸ ತಂತ್ರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications