ಪಾಟ್ನಾ ಸ್ಪೋಟ:ಮಂಗಳೂರು ಯುವತಿಯ ತೀವ್ರ ವಿಚಾರಣೆ
ಮಂಗಳೂರು, ನ 12: ಬಿಹಾರದ ಪಾಟ್ನಾದಲ್ಲಿ ನರೇಂದ್ರ ಮೋದಿಯ ಹೂಂಕಾರ್ ಸಾರ್ವಜನಿಕ ಸಭೆಯಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಹಿಂದಿನ ರೂವಾರಿ ಮಂಗಳೂರು ಮೂಲದ ಮತಾಂತರಗೊಂಡ ಮುಸ್ಲಿಂ ಮಹಿಳೆ ಎಂದು ಆರೋಪಿಸಲಾಗಿದೆ.
ಸ್ಪೋಟಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ನಗರಕ್ಕೆ ಆಗಮಿಸಿದ್ದು ಆಯೇಶಾ ಮತ್ತು ಆಕೆಯ ಪತಿಯನ್ನು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಗುರಿ ಪಡಿಸಿದ್ದಾರೆ. ಮೂಲಗಳ ಪ್ರಕಾರ ಆಯೇಶಾ ಮತ್ತು ಆಕೆಯ ಪತಿಯನ್ನು ಬುಧವಾರ (ನ 13) ಕೋರ್ಟಿಗೆ ಹಾಜರು ಪಡಿಸುವ ಸಾಧ್ಯತೆಯಿದೆ.

ಆಯೇಶಾ ಭಾನು ಎನ್ನುವ ಯುವತಿ ಇಲ್ಲಿನ ಪಂಜೆಮೊಗೆರು ನಿವಾಸಿ. ಹಿಂದೂ ಆಗಿದ್ದ ಈಕೆ ಲವ್ ಜಿಹಾದ್ ಮೂಲಕ ಇಸ್ಲಾಂಗೆ ಮತಾಂತರಗೊಂಡಿದ್ದಳು. ತದನಂತರ ಈಕೆಯನ್ನು ಭಯೋತ್ಪಾದನಾ ಚಟುವಟಿಕೆಗೆ ಬಳಸಿಕೊಳ್ಳಲಾರಂಭಿಸಲಾಯಿತು ಎಂದು ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಗಂಭೀರ ಆರೋಪ ಮಾಡಿದೆ.
ಮಂಗಳವಾರ (ನ 12) ನಗರದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡುತ್ತಿದ್ದ ಭಜರಂಗ ದಳದ ಸ್ಥಳೀಯ ಸಂಚಾಲಕ ಶರಣ್ ಪಂಪವೆಲ್, ಇಲ್ಲಿನ ಯುವತಿಯರನ್ನು ಲವ್ ಜಿಹಾದ್ ಮೂಲಕ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ.
ಈ ಬಗ್ಗೆ ಹಲವಾರು ಬಾರಿ ಹಿಂದೂಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿವೆ. ನಮ್ಮ ಹಿಂದೂ ಸಮುದಾಯ ಅಪಾಯದಲ್ಲಿದೆ. ಈ ಮತಾಂತರ ಪ್ರಕ್ರಿಯೆ ಕೇರಳದ ಪೊನ್ನಾನಿ ಕೇಂದ್ರದಲ್ಲಿ ನಡೆಯುತ್ತದೆ. ಆ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದರೆ ಇನ್ನಷ್ಟು ಉಗ್ರ ಚಟುವಟಿಕೆಯ ರಹಸ್ಯ ಬಯಲಾಗಲಿದೆ. ಇನ್ನಾದರೂ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶರಣ್ ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ಹೆಸರು ಒಂದಲ್ಲಾ ಒಂದು ಕಾರಣಕ್ಕೆ ಚಾಲ್ತಿಯಲ್ಲಿ ಬರುತ್ತಿದೆ. ಮತಾಂತರದ ಬಗ್ಗೆ ಮಾಧ್ಯಮದ ಮೂಲಕ ಸರಕಾರವನ್ನು ಬಹಳಷ್ಟು ಬಾರಿ ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ. ಉಗ್ರ ಚಟುವಟಿಕೆಗಳಿಂದ ಕರಾವಳಿ ನಗರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧಕ್ಷ ಜಗದೀಶ್ ಶೆನವಾ ಹೇಳಿದ್ದಾರೆ.
ಪಾಟ್ನಾ ಸ್ಪೋಟದ ಸಮಯದಲ್ಲಿ ಆಯೇಶಾ ಬಾನು ಅಲ್ಲಿ ಕಾಣಿಸಿಕೊಂಡಿದ್ದಳು. ಹವಾಲ ಮೂಲಕ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿ ಸ್ಪೋಟಕ್ಕೆ ಪ್ರಚೋದನೆ ನೀಡಿದ್ದಳು ಎನ್ನುವ ಆಪಾದನೆ ಕೇಳಿ ಬರುತ್ತಿದೆ. ಈ ಸಂಬಂಧ ನಗರದ ಮಂಜಟ್ಟಿ ಬಳಿ ಸೋಮವಾರ (ನ 11) ಆಯೇಶಾಳನ್ನು ಬಂಧಿಸಲಾಗಿತ್ತು.












Click it and Unblock the Notifications