Kukke Subramanya: ರಸ್ತೆಯಲ್ಲಿ ನಿಧಿ ಹುಡುಕಿದ ಸರ್ಕಾರ, ಫೆಕ್ಸ್ ವೈರಲ್
ಮಂಗಳೂರು, ನವೆಂಬರ್ 12: ನಿಧಿಯ ಹುಡುಕಾಟಕ್ಕಾಗಿ ಪುರಾತನ ಕೋಟೆ, ಸ್ಮಾರಕ, ದೇವಾಲಯಗಳ ಬಳಿ ಮಣ್ಣು ಅಗೆಯುವುದು ಕೇಳಿದ್ದೇವೆ. ಆದರೆ ನಿಧಿಗಳ್ಳರು ರಸ್ತೆಯನ್ನು ಅಗೆಯಲು ಆರಂಭಿಸಿದರೆ?. ನಿಧಿ ಆಸೆಗೆ ಸಂಪರ್ಕ ರಸ್ತೆಯನ್ನು ಸರ್ಕಾರವೇ ಅಗೆದು ಗುಂಡಿ ಮಾಡಿಟ್ಟಿದೆಯೇ?. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೆಕ್ಸ್ ಒಂದು ಈ ಕುರಿತು ಮಾಹಿತಿ ಪ್ರಶ್ನೆಯನ್ನು ಹುಟ್ಟು ಹಾಕಿದೆ. ರಸ್ತೆಗುಂಡಿ ಬಗ್ಗೆ ಗಮನ ಸೆಳೆಯಲು ಬರೆಯಲಾಗಿರುವ ಬರಹ ವೈರಲ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆಯೊಂದು ಗುಂಡಿ ಬಿದ್ದು ಅದ್ವಾನಗೊಂಡಿದೆ. ವಾಹನ ಸವಾರರು ಓಡಾಡುವುದು ಕಷ್ಟವಾಗಿದೆ. ಆದರೆ ಇಂತಹ ಸ್ಥಿತಿಗೆ ಸರ್ಕಾರವೇ ಕಾರಣ ಎಂದು ಬರೆದು ಫೆಕ್ಸ್ ಹಾಕಲಾಗಿದೆ. ಮಂಗಳವಾರ ಈ ಫೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜನರ ಗಮನ ಸೆಳೆಯುತ್ತಿದೆ.

ಫೆಕ್ಸ್ ಫುಲ್ ವೈರಲ್: ರಸ್ತೆಯಲ್ಲಿ ಗುಂಡಿಗಳು ಇರುವ ಕಾರಣ ವಾಹನ ಸವಾರರು ನಿಧಾನವಾಗಿ ಚಲಿಸಿ ಎಂದು ಹೇಳುವ ಫೆಕ್ಸ್ ಇದಾಗಿದೆ. ಆದರೆ ಇದರಲ್ಲಿ ಇರುವ ಬರಹ ಎಲ್ಲರ ಗಮನ ಸೆಳೆಯುತ್ತಿದೆ.
ಫೆಕ್ಸ್‌ನಲ್ಲಿ, 'ಎಚ್ಚರಿಕೆಯ ಫಲಕ ಯಾರೋ ಮಾಂತ್ರಿಕರು ಕೈಕ೦ಬದಿ೦ದ-ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೇಯೇ ಬಿಟ್ಟಿದ್ದಾರೆ. ನಿಧಾನವಾಗಿ ಚಲಿಸಿ' ಎಂದು ಬರೆಯಲಾಗಿದೆ.
ಈ ಮೂಲಕ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ತಾಣ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ರಸ್ತೆಯಲ್ಲಿ ಗುಂಡಿಗಳಿದ್ದು, ಅದನ್ನು ಮುಚ್ಚಿ ಎಂದು ವಿಭಿನ್ನವಾಗಿ ಮನವಿ ಮಾಡಲಾಗಿದೆ.
ರಸ್ತೆ ಬದಿ ಹಾಕಿರುವ ಈ ಫೆಕ್ಸ್ ಈಗ ಸಾಮಾಜಿಕ ಜಾಲತಾಣ ಸೇರಿದೆ. ಈ ಮೂಲಕ ಕೈಕ೦ಬದಿ೦ದ-ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯ ಸ್ಥಿತಿಗತಿ ದೇಶ ವಿದೇಶವನ್ನು ತಲುಪಿದೆ. ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಿ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಉಪ್ಪಿನಂಗಡಿ-ಕುಕ್ಕೆ ಸುಬ್ರಮಣ್ಯ ರಸ್ತೆಯಲ್ಲಿ ಇರುವ ಹೊಂಡಗಳ ವಿರುದ್ಧ ಸ್ಥಳೀಯರು ವಿಭಿನ್ನ ಪ್ರತಿಭಟನೆ ನಡೆಸಿದ್ದರು. ರಸ್ತೆಗುಂಡಿಗಳಿಗೆ ಬಾಳೆಗಿಡ, ಕೆಸುವಿನ ಗಿಡನೆಟ್ಟು ಪ್ರತಿಭಟಿಸಿದ್ದರು.
ಇದು ರಾಜ್ಯ ಹೆದ್ದಾರಿ ಕುಕ್ಕೆ ಸುಬ್ರಮಣ್ಯಕ್ಕೆ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದರೆ ಇಂತಹ ರಸ್ತೆಯ ದುರವಸ್ಥೆ ನೋಡಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ರಸ್ತೆಯಲ್ಲಿ ಹೊಂಡಗಳು ಇರುವ ಕಾರಣ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು.
ಇಂತಹ ಹೊಂಡಗಳ ಕಾರಣ ಬೈಕ್ ಸವಾರರು ರಾತ್ರಿ ವೇಳೆ ಸಂಚರಿಸುವಾಗ ಹೊಂಡ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಘಟನೆಗಳು ನಡೆದಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ರಸ್ತೆಯಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲ. ಅಪಘಾತಗೊಂಡು ಗಾಯವಾದವರನ್ನು ಕಡಬ, ಉಪ್ಪಿನಂಗಡಿ, ಮಂಗಳೂರು ನಗರದ ಆಸ್ಪತ್ರೆಗೆ ದಾಖಲಿಸಬೇಕು ಎಂದು ತಿಳಿಸಲಾಗಿತ್ತು.
ಈಗ ಕೈಕ೦ಬದಿ೦ದ-ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೇಯೇ ಬಿಟ್ಟಿದ್ದಾರೆ ಎಂದು ಫೆಕ್ಸ್ ಬರೆಸಿ, ಸರ್ಕಾರದ ಗಮನ ಸೆಳೆಯಲಾಗಿದೆ.
ಈ ರಸ್ತೆ ಯಾರ ವ್ಯಾಪ್ತಿಗೆ ಬರುತ್ತದೆ?, ಇದನ್ನು ಸರಿಪಡಿಸುವವರು ಯಾರು? ಇನ್ನೊಂದು ಫೆಕ್ಸ್ ಹಾಕಿಸುವ ಮುನ್ನ ಕೈಕ೦ಬದಿ೦ದ-ಕುಕ್ಕೆ ಸುಬ್ರಹ್ಮಣ್ಯ ವರೆಗಿನ ರಸ್ತೆಯಲ್ಲಿ ಗುಂಡಿಗಳನ್ನು ಸಂಬಂಧಪಟ್ಟವರು ಮುಚ್ಚಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications