Kukke Subramanya: ಶ್ರೀಮಂತ ದೇಗುಲ ಪಟ್ಟಿಯಲ್ಲಿ ಕುಕ್ಕೆ ಸುಬ್ರಮಣ್ಯ, ವಾರ್ಷಿಕ ಆದಾಯ ಎಷ್ಟು?
ಮಂಗಳೂರು, ಏಪ್ರಿಲ್ 17: ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಅತ್ಯಂತ ಶ್ರೀಮಂತ ದೇವಾಲಯ ಯಾವುದು?. ನಾಗಾರಾಧನೆಯ ನಾಡು, ಪ್ರಸಿದ್ಧ ಧಾರ್ಮಿ ಕೇಂದ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತೊಮ್ಮೆ ರಾಜ್ಯದ ಶ್ರೀಮಂತ ದೇವಾಲಯವಾಗಿದೆ. 2024-25ನೇ ಸಾಲಿನಲ್ಲಿ ದೇವಾಲಯದ ವಾರ್ಷಿಕ ಆದಾಯ 155.59 ಕೋಟಿ ರೂ. ಆಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ದೇಶ-ವಿದೇಶದ ಅಪಾರ ಭಕ್ತರು, ರಾಜಕೀಯ ನಾಯಕರು, ಸಿನಿಮಾ ನಟರು ದೇವಾಲಯಕ್ಕೆ ಆಗಮಿಸುತ್ತಾರೆ. ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಸೇರಿದಂತೆ ವಿವಿಧ ಸೇವೆಗಳನ್ನು ದೇವಾಲಯದಲ್ಲಿ ಮಾಡಿಸುತ್ತಾರೆ. ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಶ್ರೀಮಂತ ದೇವಾಲಯದ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತದೆ. 2023-24ಕ್ಕೆ ಹೋಲಿಕೆ ಮಾಡಿದರೆ ದೇವಾಲಯದ ಆದಾಯ 2024-25ರಲ್ಲಿ 9.94 ಕೋಟಿ ರೂ. ಹೆಚ್ಚಳವಾಗಿದೆ. ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆಯೂ ಭಕ್ತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.
ರಾಜ್ಯದ ಶ್ರೀಮಂತ ದೇವಾಲಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ 2024-25ನೇ ಸಾಲಿನ ಆದಾಯ 155.95 ಕೋಟಿ ರೂ. ಎಂಬ ಮಾಹಿತಿ ಸಿಕ್ಕಿದೆ. ಕಳೆದ ವರ್ಷ ದೇವಾಲಯದ ವಾರ್ಷಿಕ ಆದಾಯ 146.01 ಕೋಟಿಯಾಗಿತ್ತು. ಅತಿ ಹೆಚ್ಚು ಆದಾಯವನ್ನುಗಳಿಸುವ ಮೂಲಕ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇಗುಲವಾಗಿದೆ.
ವಾರ್ಷಿಕ ವರದಿಯ ಪ್ರಕಾರ ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಮೂಲಗಳಿಂದ ಬಂದಿರುವ ಆದಾಯ ಒಟ್ಟು 155.95 ಕೋಟಿ ರೂ.ಗಳು. ದೇವಾಲಯದ ಒಟ್ಟು ಖರ್ಚು 79.82 ಕೋಟಿ ರೂ.ಗಳು. ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯ, ದೇಶಗಳಿಂದ ನಾಗಾರಾಧನೆಗಾಗಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುತ್ತಾರೆ.
ಮಾಹಿತಿಗಳ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ 2011-12ರ ಆದಾಯ 56.24 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 72.73 ಕೋಟಿ, 2022-23ರಲ್ಲಿ 123 ಕೋಟಿ ಮತ್ತು 2023-24ರ ಆದಾಯ 146.01 ಕೋಟಿ. ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ದೇವಾಲಯದ ವಾರ್ಷಿಕ ಆದಾಯ ಹೆಚ್ಚಾಗುತ್ತಲೇ ಸಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ 'ಶಕ್ತಿ' ಯೋಜನೆ ಬಳಿಕ ಕುಕ್ಕೆ ಸುಬ್ರಮಣ್ಯಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವಾಗಿದೆ. ಈ ಕುರಿತು ಈಗಾಗಲೇ ಹಲವು ವರದಿಗಳು ಬಂದಿವೆ. ಅಂಕಿ ಅಂಶಗಳನ್ನು ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಶೇರ್ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,563 ದೇವಾಲಯಗಳಿವೆ. ಆದಾಯದ ಆಧಾರದ ಮೇಲೆ ಅವುಗಳನ್ನು ಎ, ಬಿ & ಸಿ ಎಂದು ವಿಭಾಗ ಮಾಡಲಾಗಿದೆ. 2022-23ರಲ್ಲಿ ಈ ದೇವಾಲಗಳ ಆದಾಯ 709 ಕೋಟಿಯಾಗಿತ್ತು. 2023-24ರಲ್ಲಿ ಅದು 1000 ಕೋಟಿ ರೂ. ದಾಟಿದೆ.
ವರ್ಷದಿಂದ ವರ್ಷಕ್ಕೆ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಜಾತ್ರೆ ಸಮಯ ಮಾತ್ರವಲ್ಲ ಸಾಲು ಸಾಲು ರಜೆ, ವಾರಾಂತ್ಯದ ಸಂದರ್ಭದಲ್ಲಿಯೂ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ, ವಿವಿಧ ಸೇವೆಗಳನ್ನು ಮಾಡಿಸುತ್ತಾರೆ.












Click it and Unblock the Notifications