ಪಾರ್ಪಿಕಲು ಬಳಿ ತಿರುವಿನಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಮಂಗಳೂರು, ಆಗಸ್ಟ್ 06: ಕೆಎಸ್ಆರ್ ಟಿಸಿ ಬಸ್ ಹಾಗು ಮಾರುತಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಕಳೆದ ರಾತ್ರಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕೊಕ್ಕಡದ ಸಮೀಪ ಕೌಕ್ರಾಡಿ ಗ್ರಾಮದ ಪಾರ್ಪಿಕಲು ಬಳಿಯ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಧರ್ಮಸ್ಥಳದಿಂದ ಬೆಂಗಳೂರು ಕಡೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾರುತಿ ಕಾರಿನಲ್ಲಿದ್ದ ದಿನೇಶ್ (32), ಸಂದೇಶ್ (30) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಯುವಕರು ಕಾರಿನಿಂದ ಹೊರಗೆ ತೆಗೆದು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕರು ಮೃತಪಟ್ಟಿದ್ದಾರೆ. ಅಫಘಾತದ ತೀವ್ರತೆಯಿಂದ ಮಾರುತಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

ಮೃತರನ್ನು ಧರ್ಮಸ್ಥಳದ ಮುಳಿಕ್ಕಾರು ಮನೆ ವೀರಪ್ಪ ಮಲೆಕುಡಿಯರವರ ಪುತ್ರ ದಿನೇಶ್ ಪಿ. ಮತ್ತು ಇನ್ನೋರ್ವ ಧರ್ಮಸ್ಥಳದ ಸಂದು ಲೈಟಿಂಗ್ಸ್ ನ ಮಾಲೀಕ ಸಂದೇಶ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications