ಡಿ.1 ರಂದು ಮೂಡಬಿದರೆಯ ಪ್ರಸಿದ್ಧ ಕೋಟಿ ಚೆನ್ನಯ್ಯ ಕಂಬಳಕ್ಕೆ ಚಾಲನೆ
ಮಂಗಳೂರು, ನವೆಂಬರ್ 30: ಮೂಡಬಿದರೆಯ ಕಡಲಕೆರೆಯಲ್ಲಿ ನಡೆಯುವ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ನಾಳೆ (ಡಿಸೆಂಬರ್.1) ಚಾಲನೆ ದೊರೆಯಲಿದೆ.
16ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳವು ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಕಾನೂನಿನ ಚೌಕಟ್ಟಿನೊಳಗೆ ಅಹಿಂಸಾತ್ಮಕವಾಗಿ 24 ಗಂಟೆಯೊಳಗೆ ನಡೆಸಲಾಗುವುದು ಎಂದು ಕಂಬಳ ಸಮಿತಿ ತಿಳಿಸಿದೆ.
ಈ ಜೋಡು ಕೆರೆ ಕಂಬಳದಲ್ಲಿ ಈ ಬಾರಿ ಸುಮಾರು 150ಕ್ಕೂ ಅಧಿಕ ಜತೆ ಕೋಣಗಳು ಭಾಗವಹಿಸಲಿವೆ. ಕಂಬಳದಲ್ಲಿ ಬೆತ್ತವನ್ನು ಬಳಸಲಾಗುವುದಿಲ್ಲ. ಆದರೆ ಅತಿಥಿಗಳಿಗೆ ಬೆತ್ತವನ್ನು ಸ್ಮರಣಿಕೆಯಾಗಿ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.

ಈ ಬಾರಿ ಸ್ಪರ್ಧೆಯ ನಿಖರ ಫಲಿತಾಂಶಕ್ಕಾಗಿ ಲೇಸರ್ ಟೈಮಿಂಗ್ ಅಳವಡಿಸಲಾಗುವುದು ವಿಶೇಷವಾಗಿದೆ. ಕಂಬಳ ಅಭಿಮಾನಿಗಳಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಕಂಬಳದ ಕ್ಷೇತ್ರದಲ್ಲಿ ಅಪಾರವಾಗಿ ಶ್ರಮಿಸಿರುವ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ, ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ನಾರಾವಿ ಯುವರಾಜ್ ಜೈನ್, ಕಂಬಳಕ್ಕಾಗಿ ಪ್ರೋತ್ಸಾಹ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಕಂಬಳದ ಪರ ಕೇಂದ್ರ ಸರಕಾರದಲ್ಲಿ ಸುಗ್ರೀವಾಜ್ಞೆ ತರಲು ಪ್ರಯತ್ನಿಸಿದ ಡಿ.ವಿ ಸದಾನಂದ ಗೌಡ ಅವರನ್ನು ಸನ್ಮಾನಿಸಲು ಕಂಬಳ ಸಮಿತಿ ತೀರ್ಮಾನಿಸಿದೆ.

ಕಂಬಳದ ಯಶಸ್ಸಿಗಾಗಿ 13 ಉಪಸಮಿತಿಗಳನ್ನು ರಚಿಸಿದ್ದು ಎಲ್ಲಾ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಸ್ಥಳೀಯರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೆಫ್ರಿಗಳಾಗಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications