ಕೇರಳದ ಶ್ರೀಮಂತ ದೇವಸ್ಥಾನಕ್ಕೆ ಮುಖ್ಯ ಅರ್ಚಕರಾಗಿ ಕೊಕ್ಕಡ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕ
ಮಂಗಳೂರು, ಜೂನ್ 17: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೇರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ.
ಜೂ.16ರಂದು ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಅವರು ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಶ್ರೀಅನಂತಪದ್ಮನಾಭ ಸ್ವಾಮಿಯ ಸೇವೆಗೆ ಕರ್ನಾಟಕದ ಅರ್ಚಕರು ನೇಮಕಗೊಂಡಿರುವುದು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯವೇ ಹೆಮ್ಮೆ ಪಡುವ ವಿಚಾರವಾಗಿದೆ.

ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಅವರು ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದು, ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿಗಳ ಪುತ್ರರಾಗಿದ್ದಾರೆ. ಹಿಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ ಇದೇ ದೇವಸ್ಥಾನದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಅವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು. ಪಾಲಾಲೆ ದಿ. ಸತೀಶ ಯಡಪಡಿತ್ತಾಯರಲ್ಲಿ ವೇದ ಅಭ್ಯಾಸವನ್ನು ಮಾಡಿದ್ದ ಸತ್ಯನಾರಾಯಣ ತೋಡ್ತಿಲ್ಲಾಯರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಪೂಜಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ ಸ್ನೇಹ ಹಾಗೂ ಪುತ್ರ ಸೌರಭ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಅಕ್ಕರ ದೇಸಿ ಸಮುದಾಯ ಸಂಘವು ರಳದ ತಿರುವನಂತಪುರದ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರ ಹುದ್ದೆಗೆ ಸತ್ಯನಾರಾಯಣರವರ ಹೆಸರನ್ನು ಶಿಫಾರಸು ಮಾಡಿತ್ತು. ಇದೀಗ ಆ ಭ್ಯಾಗ್ಯ ಸತ್ಯನಾರಾಯಣರವರನ್ನು ಹುಡುಕಿ ಬಂದಿದೆ. ಕೊಕ್ಕಡದ ಎಡಪಡಿತ್ತಾಯ, ಬಾಳ್ತಿಲ್ಲಾಯ, ಶಬರಾಯ, ಉಪ್ಪಾರ್ಣ, ತೋಡ್ತಿಲ್ಲಾಯ ಕುಲದ ಸದಸ್ಯರಿಗೆ ಈ ಹಿಂದಿನಿಂದಲೂ ಶ್ರೀಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ಇದೆ ಎನ್ನಲಾಗಿದೆ.












Click it and Unblock the Notifications