Srinidhi Shetty: ನೇಮೋತ್ಸವ ಹರಕೆ ತೀರಿಸಿದ KGF ಬೆಡಗಿ: ಶ್ರೀನಿಧಿ ಶೆಟ್ಟಿಗೆ ದೈವದ ಅಭಯ
ಮಂಗಳೂರು, ಮೇ 08: ತುಳುನಾಡಿನಲ್ಲಿ ದೈವಾರಾಧನೆಗೆ ತುಂಬಾ ಪ್ರಾಮುಖ್ಯತೆ ಇದೆ. ಅದಕ್ಕೆ ಕಾರಣ ದೈವದ ಕಾರಣಿಕ ಎನ್ನುವುದು ದೈವಾರಾಧಕರ ಮಾತು. ತುಳುನಾಡಿನ ಜನರು ದೈವ, ದೈವಾರಾಧನೆಯ ಮೇಲೆ ಅತಿಯಾದ ನಂಬಿಕೆ ಇಟ್ಟಿರುತ್ತಾರೆ. ತಾವೇ ಎಲ್ಲೇ ಹೋದರೂ, ಏನೇ ಆದರೂ, ಜೀವನದಲ್ಲಿ ಯಶಸ್ಸು ಕಂಡರೂ, ಸೋಲು ಕಂಡರೂ ಮೊದಲು ನೆನೆಯುವುದು ದೈವವನ್ನು. ತುಳುನಾಡಿನ ಜನರ ಅಚಲವಾದ ನಂಬಿಕೆ ಮತ್ತು ಶಕ್ತಿ ದೈವ ಎಂದರೆ ತಪ್ಪಾಗಲಾರದು.
ತುಳುನಾಡಿನ ಅನೇಕ ಕಲಾವಿದರು ಸಿನಿಮಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರೂ ಕೂಡ ಒಬ್ಬರು. ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರರಂಗದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಶ್ರೀನಿಧಿ ಶೆಟ್ಟಿ ತಮ್ಮ ನಂಬಿಕೆ ಆರಾಧನೆಗಳನ್ನು ಮರೆತಿಲ್ಲ. ಅದರಂತೆ ತಾವು ಹೊತ್ತ ಹರಕೆಯನ್ನು ಪೂರೈಸಿದ್ದಾರೆ. ಶ್ರೀನಿಧಿ ಶೆಟ್ಟಿಯವರು ತನ್ನ ಕುಟುಂಬದ ದೈವಗಳಿಗೆ ಹೇಳಿದ್ದ ಹರಕೆಯ ನೇಮೋತ್ಸವವನ್ನು ನೆರವೇರಿಸಿದ್ದಾರೆ.
ಮಂಗಳೂರಿನ ಹೊರವಲಯದ ಕಿನ್ನಿಗೋಳಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆಸಿದ್ದಾರೆ. ಈ ಹಿಂದೆ ತನ್ನ ಇಷ್ಟಾರ್ಥ ಸಿದ್ದಿಗಾಗಿ ಹರಕೆ ಹೊತ್ತಂತೆ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಿಸಿದ್ದಾರೆ.

ಈ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದಾರೆ. ತನ್ನ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು, ತನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿಕೊಂಡಿದ್ದರು. ಅದರಂತೆ ಶ್ರೀನಿಧಿ ಶೆಟ್ಟಿ ಇದೀಗ ಹರಕೆಯನ್ನು ಸಲ್ಲಿಸಿದ್ದಾರೆ. ಇನ್ನು ನೇಮೋತ್ಸವದಲ್ಲಿ ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀಯ, ಯಶಸ್ಸು ಸಿಗಲಿದೆ ಎಂದು ದೈವಗಳು ಶ್ರೀನಿಧಿ ಶೆಟ್ಟಿಗೆ ಅಭಯ ನೀಡಿದೆ ಎನ್ನಲಾಗಿದೆ.












Click it and Unblock the Notifications