ಕಾವ್ಯಾ ಪೂಜಾರಿ ಸಾವಿನ ತನಿಖೆ ಸಿಬಿಐಗೆ ವಹಿಸಲು ಆಗ್ರಹ
ಮಂಗಳೂರು, ಜುಲೈ 29: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ಪ್ರಮುಖರಾದ ಸಹನಾ ಕುಂದರ್ ಸೂಡ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆ ನಾಡು ನುಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದರೆ ಇಂತಹ ಘಟನೆಗಳಾಗುತ್ತಿರುವುದು ಆತಂಕಕಾರಿ ವಿಚಾರ ಎಂದರು.
ಡಾ. ಮೋಹನ್ ಆಳ್ವ ಅವರು ಈ ಘಟನೆಯ ಬಗ್ಗೆ ತಮ್ಮ ಸಂಸ್ಥೆಯಲ್ಲಿ ನಡೆದಿದೆ ಎಂಬುದನ್ನು ಮರೆತು ಒಬ್ಬ ನಾಗರಿಕನಾಗಿ ನೋಡಲಿ. ಆಗ ಮಾತ್ರ ಇಲ್ಲಿ ನ್ಯಾಯ ಸಿಗಲು ಸಾಧ್ಯವಿದೆ. ಅಲ್ಲದೆ ಪೋಷಕರಿಗೂ ಇನ್ನು ಮುಂದೆ ಹೆಣ್ಣು ಮಕ್ಕಳನ್ನು ಸಂಸ್ಥೆಗೆ ಕಳುಹಿಸುವ ಧೈರ್ಯ ಬರಲಿದೆ ಎಂದರು.

ಮುಖಂಡ ಸಂಕೇತ್ ಪೂಜಾರಿ ಮಾತನಾಡಿ, ಕಾವ್ಯಾ ಪೂಜಾರಿ ಉತ್ತಮ ಕ್ರೀಡಾಪಟುವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯವಳಲ್ಲ. ಇವಳ ಆತ್ಮಹತ್ಯೆಗೆ ದೈಹಿಕ ಶಿಕ್ಷಕನ ಕಿರುಕುಳವೇ ಕಾರಣ. ಇದರಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಭಾಗಿಯಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಬಿರುವೆರ್ ಕುಡ್ಲ ಸಂಘಟನೆ ಮುಖಂಡರಾದ ವಿದ್ಯಾ, ರಾಕೇಶ್ ಪೂಜಾರಿ, ಪ್ರಾಣೇಶ್ ಬಂಗೇರ, ಶರತ್ ಪೂಜಾರಿ, ವಿಜೇಶ್, ಗಣೇಶ್ ಉಪಸ್ಥಿತರಿದ್ದರು.
ಸಿಐಡಿ ತನಿಖೆಗೆ ಶ್ರೀರಾಮಸೇನೆ ಆಗ್ರಹ
ಕಾವ್ಯಾಳ ಸಂಶಯಾಸ್ಪದ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮತ್ತು ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಶನಿವಾರ ಜಿಲ್ಲಾಧಿಕಾರಿಗೆ ಮನವಿ ನೀಡಿತು. ಜಿಲ್ಲಾಧಿಕಾರಿ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮನವಿ ಸ್ವೀಕರಿಸಿದರು.

ಪ್ರಕರಣ ಮುಚ್ಚಿ ಹಾಕಲು ಶಿಕ್ಷಣ ಸಂಸ್ಥೆಯು ಹಲವಾರು ವಾಮಮಾರ್ಗಗಳನ್ನು ಹುಡುಕಿಕೊಂಡಿದ್ದು, ಮೃತ ಕಾವ್ಯಾಳ ಕುಟುಂಬದವರಿಗೆ ನ್ಯಾಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಹಾಗೂ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಧನ ಒದಗಿಸುವಂತೆ ಶ್ರೀರಾಮ ಸೇನೆ ಮನವಿಯಲ್ಲಿ ಆಗ್ರಹಿಸಿದೆ.
ಕಟೀಲು ದೇವರಗುಡ್ಡೆಯ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಏಕೈಕ ಪುತ್ರಿ ಕಾವ್ಯಾ ಒಂದೂವರೆ ತಿಂಗಳಿನಿಂದ ಮೂಡಬಿದ್ರೆಯ ಆಳ್ವಾಸ್ ನಲ್ಲಿ ಲವಲವಿಕೆಯಿಂದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಅವಳ ಸಾವು ಆಕೆಯ ಸಹಪಾಠಿಗಳಿಗೆ ಅನುಮಾನ ಉಂಟು ಮಾಡಿದೆ ಎಂದರು.












Click it and Unblock the Notifications